ನಾನೂ ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ: ಮಾಜಿ ಸಚಿವ ಟಿ.ಬಿ ಜಯಚಂದ್ರ

ತುಮಕೂರು: ನಾನು ಅತಿ ಚಿಕ್ಕ ವಯಸ್ಸಿನಲ್ಲಿ ಕಾಂಗ್ರೆಸ್​ ಪಕ್ಷ ಸೇರಿದೆ. ಕಿರಿಯ ವಯಸ್ಸಿನಲ್ಲಿ ವಿಧಾನಸಭೆ ಪ್ರವೇಶ ಮಾಡಿದೆ. ಅಂದಿನಿಂದ ಇಂದಿನವರೆಗೂ ಪಕ್ಷಕ್ಕಾಗಿ ದುಡಿದು, ಪಕ್ಷ ಸಂಘಟನೆ ಮಾಡಿದ್ದೇನೆ. ಹೀಗಾಗಿ ನಾನು ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಮಾಜಿ ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಟಿ.ಬಿ.ಜಯಚಂದ್ರ, ನಾನು ಕೂಡ ಪಕ್ಷಕ್ಕಾಗಿ ದುಡಿದಿದ್ದೇನೆ. ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ 5 ವರ್ಷ ಅವಧಿಯಲ್ಲಿ ಹಲವು ಸಂಕಷ್ಟ ಎದುರಿಸುವ ಮೂಲಕ ಸರ್ಕಾರದ ಉಳುವಿಗೆ ಟೊಂಕ ಕಟ್ಟಿನಿಂತಿದ್ದೆ. ಪಕ್ಷ ನನಗೆ ಜವಾಬ್ದಾರಿ ನೀಡಿದ್ರೆ ಸಮರ್ಥವಾಗಿ ನಾನು ನಿಭಾಯಿಸುತ್ತೇನೆ. ಈ ಕುರಿತು ಸೂಕ್ತ ಸಂಧರ್ಭದಲ್ಲಿ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್​ ಗಾಂಧಿಯನ್ನು ಭೇಟಿ ಮಾಡುತ್ತೇನೆ ಎಂದರು.
ಇನ್ನು ಸಮ್ಮಿಶ್ರ ಸರ್ಕಾರ ರಚನೆ ಆದ ನಂತರ ಇಲ್ಲಿಯ ತನಕ ಸರ್ಕಾರ ಸರಿಯಾಗಿ ಟೇಕಾಫ್​ ಆಗಿರಲಿಲ್ಲ. ಇನ್ಮುಂದೆ ಎಲ್ಲಾ ಸರಿ ಹೋಗುತ್ತದೆ. ಸಮ್ಮಿಶ್ರ ಸರ್ಕಾರದಲ್ಲಿ ಮನಸ್ತಾಪ, ಭಿನ್ನಾಭಿಪ್ರಾಯಗಳು ಇರುವುದು ಸಹಜ. ಇದು ಕೂಡಲೇ ಶಮನವಾಗುತ್ತೆ. ಮುಖ್ಯಮಂತ್ರಿ ‌ಕುಮಾರಸ್ವಾಮಿಯವರಿಗೆ ನಮ್ಮ ಪಕ್ಷ ಬೇಷರತ್ ಬೆಂಬಲ‌ ನೀಡಿದೆ. ನಾನು ಜಿಲ್ಲೆ ಮತ್ತು ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿರುತ್ತೇನೆ ಎಂದು ಮಾಜಿ ಸಚಿವ ಟಿ.ಬಿ. ಜಯಚಂದ್ರ ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv