ಹೂವಿನ ಹಡಗಲಿ: ಈ ಬಾರಿ ಮತದಾರನ ಮುದ್ರೆ ‘ಹೂ’ವಿಗೋ, ‘ಹಸ್ತ’ಕ್ಕೋ?

ಬಳ್ಳಾರಿಯ 9 ವಿಧಾನ ಸಭೆ ಕ್ಷೇತ್ರಗಳಲ್ಲಿ ಹೂವಿನಹಡಗಲಿ ಕ್ಷೇತ್ರ ಕೂಡ ಪ್ರಮುಖವಾದುದು. ಡಿವೈಎಸ್ಪಿ ಅನುಪಮಾ ಶೆಣೈ ಜೊತೆಗಿನ ಸಂಘರ್ಷದಲ್ಲಿ ವಿವಾದಕ್ಕೊಳಗಾದ ಆವಾಗಿನ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕ್‌ ಅಭ್ಯರ್ಥಿಯಾಗಿರೋದ್ರಿಂದ ಈ ಕ್ಷೇತ್ರಕ್ಕೆ ಮಹತ್ವ ಬಂದಿದೆ. ಇಲ್ಲಿ ಒಮ್ಮೆ ಗೆದ್ದವರು ಮತ್ತೊಂದು ಅವಧಿಗೆ ಆಯ್ಕೆ ಆಗಲ್ಲ ಎಂಬ ವಾಡಿಕೆ ಇದೆ. 2008ರಲ್ಲಿ ಕ್ಷೇತ್ರಗಳ ಪುನರವಿಂಗಡನೆಯಲ್ಲಿ ಈ ಕ್ಷೇತ್ರ ಮೀಸಲು ಕ್ಷೇತ್ರವಾಗಿ ಪರಿವರ್ತನೆಗೊಂಡಿದೆ. ಕ್ಷೇತ್ರದಲ್ಲಿ ಒಟ್ಟು 1,82,908 ಮತದಾರರಿದ್ದು ಅದರಲ್ಲಿ 92,656 ಪುರುಷರು, 90,251 ಮಹಿಳಾ ಮತದಾರರು. ಜಾತಿ ಲೆಕ್ಕಾಚಾರ ನೋಡೋದಾದ್ರೆ, 30000 ಎಸ್ಟಿ, 50000 ಎಸ್ಸಿ, 10000 ಮುಸ್ಲಿಂ, 40000 ಲಿಂಗಾಯತ ಮತ್ತು ಉಪ್ಪಾರ, ಬಲಿಜ, ಗಂಗಾಮತಸ್ಥ ಸೇರಿ 15000 ಮತದಾರರಿದ್ದಾರೆ.
ಕ್ಷೇತ್ರದ ಹಾಲಿ ಶಾಸಕರು ಯಾರು.?
ಹಡಗಲಿ ಮೀಸಲು ವಿಧಾನ ಸಭಾ ಕ್ಷೇತ್ರದಿಂದ ಕಳೆದ ಬಾರಿ ಪಿ.ಟಿ. ಪರಮೇಶ್ವರ ನಾಯ್ಕ್‌ ಗೆಲುವು ಸಾಧಿಸಿದ್ದಾರೆ. ಪ್ರತಿಶತ 51% ರಷ್ಟು ಮತಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿ ಬಿ.ಚಂದ್ರ ನಾಯಕ್ ಅವರನ್ನ ಸೋಲಿಸಿದ್ದರು. ಇನ್ನೂ ಬಿಜೆಪಿ ಬಿ. ಚಂದ್ರ ನಾಯಕ್ ಪ್ರತಿಶತ ೧೫% ರಷ್ಟು ಮತ ಪಡೆದರೆ, ಕೆಜೆಪಿ ಇಂದ ಸ್ಪರ್ಧಿಸಿದ್ದ ಮಧು ನಾಯಕ್ ಪ್ರತಿಶತ ೧೫% ರಷ್ಟು ಮತ ಪಡೆದು ಪರಾಭವಗೊಂಡಿದ್ದರು.
ಈ ಬಾರಿ ಕಣದಲ್ಲಿ ಇರುವವರು ಯಾಱರು.?
ಕಳೆದ ಬಾರಿ ಗೆಲುವು ಸಾಧಿಸಿದ್ದ ಪಿ ಟಿ ಪರಮೇಶ್ವರ ನಾಯ್ಕ್‌ ಮತ್ತೊಮ್ಮೆ ಕಾಂಗ್ರೆಸ್ ನಿಂದ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇನ್ನೂ ಬಿಜೆಪಿಯಿಂದ ಕಳೆದ ಬಾರಿ ಸ್ಪರ್ಧಿಸಿ ಸೋತಿರುವ ಬಿ ಚಂದ್ರ ನಾಯ್ಕ್‌ ಅವರೇ ಮತ್ತೊಮ್ಮೆ ಅಖಾಡಕ್ಕಿಳಿದಿದ್ದಾರೆ. ಜೆಡಿಎಸ್‌ನಿಂದ ಪುತ್ರೇಶ್ ಪ್ರಥಮ ಬಾರಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇನ್ನೂ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಓದೋ ಗಂಗಪ್ಪ ಕಣದಲ್ಲಿದ್ದಾರೆ. ಮೇಲ್ನೋಟಕ್ಕೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ‌ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದರೂ ಬಂಡಾಯ ಅಭ್ಯರ್ಥಿಯಿಂದಲೂ ತೀವ್ರ ಪೈಪೋಟಿ ಎದುರಾಗುವ ಲಕ್ಷಣಗಳಿವೆ.
ಅಪವಾದಗಳನ್ನು ಮೆಟ್ಟಿ ನಿಲ್ತಾರಾ ಪರಮೇಶ್ವರ ನಾಯ್ಕ್‌?
ಪ್ಲಸ್ ಪಾಯಿಂಟ್: ಮಾಜಿ ಮುಖ್ಯಮಂತ್ರಿ ದಿವಂಗತ ಎಂ ಪಿ‌ ಪ್ರಕಾಶ್ ಅವರ ಶಿಷ್ಯ ಎಂದು ಕ್ಷೇತ್ರದಲ್ಲಿ ಗುರುತಿಸಿ ಕೊಂಡಿದ್ದಾರೆ.

ಕಾಂಗ್ರೆಸ್ ಸರ್ಕಾರದಿಂದ ಕ್ಷೇತ್ರದಲ್ಲಿ ಕೆಲವಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಕೆಲವು ಲಿಂಗಾಯತ ನಾಯಕರು ಸೇರಿದಂತೆ ಹಿಂದುಳಿದ ಸಮುದಾಯದ ನಾಯಕರು ಇವರ ಬೆನ್ನಿಗೆ ನಿಂತಿರೋದು ವರವಾಗಬಹುದು.
ಮೈನಸ್ ಪಾಯಿಂಟ್: ಕ್ಷೇತ್ರದಲ್ಲಿ ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ ಪ್ರಕಾಶ್ ಅವರ ಪುತ್ರ ರವೀಂದ್ರ ಜೊತೆಗೆ ಭಿನ್ನಾಭಿಪ್ರಾಯವಿದೆ. ಕ್ಷೇತ್ರದಲ್ಲಿ ತಮ್ಮ ಹಿಡಿತ ಸಾಧಿಸುವಲ್ಲಿ‌ ವಿಫಲಾರಾಗಿದ್ದರೆ. ಸಚಿವರಾಗಿದ್ದ ಅವಧಿಯಲ್ಲಿ ಡಿವೈಎಸ್ಪಿ ಅನುಪಮಾ ಶೆಣೈ ಜೊತೆಗಿನ ಸಂಘರ್ಷ ಇವರಿಗೆ ಮುಳುವಾಗುವ ಸಾಧ್ಯತೆ ಇದೆ. ಇಷ್ಟೇ ಅಲ್ಲ, ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದರೂ ನಿರೀಕ್ಷಿತ ಕೆಲಸಗಳಾಗಿಲ್ಲ ಅಂತಾ ಜನರಿಗೆ ಅಸಮಾಧಾನವಿದೆ.
ಗೆಲುವಿನ ಬಾವುಟ ಹಾರಿಸ್ತಾರಾ ಚಂದ್ರ ನಾಯ್ಕ್‌?
ಪ್ಲಸ್ ಪಾಯಿಂಟ್: ಕಳೆದ ಬಾರಿ ಕೆಜೆಪಿ-ಬಿಜೆಪಿಯಿಂದ ಹರಿದು ಹಂಚಿಹೋಗಿದ್ದ ಮತಗಳು ಈ ಬಾರಿ ಒಟ್ಟುಗೂಡುವ ಸಾಧ್ಯತೆ ಇದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಲಿ‌ ಶಾಸಕರ ದರ್ಪದ ವರ್ತನೆಯ ಬಗ್ಗೆ ಜನರಿಗೆ ಅಸಮಾಧಾನವಿರುವುದು ಇವರಿಗೆ ವರವಾಗಬಹುದು. ಪಕ್ಷದಲ್ಲಿ ಒಗ್ಗಟ್ಟು ಮೂಡಿರೋದು ಸಹ ಸಹಾಯವಾಗಲಿದೆ. ಕ್ಷೇತ್ರದಲ್ಲಿ ಒಂದು ಬಾರಿ ಗೆದ್ದರೆ ಇನ್ನೊಂದು ಬಾರಿ ಗೆಲ್ಲುವುದಿಲ್ಲ ಎನ್ನುವ ಪ್ರತೀತಿ ಇರೋದು ಕೂಡಾ ಚಂದ್ರ ನಾಯ್ಕ್‌ಗೆ ಫಲ ನೀಡಬಹುದು.
ಮೈನಸ್ ಪಾಯಿಂಟ್: ಬಿಜೆಪಿ ಟಿಕೆಟ್‌ ಸಿಗದೆ ಪಕ್ಷದ ಪ್ರಬಾವಿ ನಾಯಕ ಓದೋ ಗಂಗಪ್ಪ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿರೋದು ಮುಳುವಾಗಬಹುದು. ಜೊತೆಗೆ ಸ್ಥಳೀಯ ಬಿಜೆಪಿಯಲ್ಲೂ ಕೆಲ ಸಣ್ಣಪುಟ್ಟ ಅಸಮಾಧಾನಗಳಿರೋದು ಗೆಲುವಿಗೆ ಅಡ್ಡಿಯಾಗಬಹುದು.
ಇನ್ನೂ ಇಲ್ಲಿ ಜೆಡಿಎಸ್‌ನಿಂದ ಪ್ರಥಮ ಬಾರಿಗೆ ಕಣಕ್ಕಿಳಿದಿರುವ ಪುತ್ರೇಶ್ ಅಷ್ಟೊಂದು ಪ್ರಭಾವ ಇಲ್ಲದೆ ಇದ್ದರೂ ಕ್ಷೇತ್ರದಲ್ಲಿ ಸಾಕಷ್ಟು ಪ್ರಚಾರ ಮಾಡುತ್ತಿದ್ದಾರೆ. ಆದರೆ ಇವರಿಗೆ ಜೆಡಿಎಸ್ ಯಾವುದೇ ಮುಖಂಡರು ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿಲ್ಲ. ಇನ್ನೂ ಬಿಜೆಪಿ ಬಂಡಾಯ ಅಭ್ಯರ್ಥಿ ಓದೋ ಗಂಗಪ್ಪ ಕ್ಷೇತ್ರದಲ್ಲಿ ಅಬ್ಬದ ಪ್ರಚಾರ ಮಾಡುತ್ತಿದ್ದು ಎರಡು ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು ನಿಂತಿದ್ದಾರೆ. ಒಟ್ಟಿನಲ್ಲಿ ವಿವಾದ, ದರ್ಪದ ನಡವಳಿಕೆಯಿಂದಲೇ ವಿವಾದಕ್ಕೀಡಾಗಿರುವ ಟಿ ಪಿ ಪರಮೇಶ್ವರ್‌ ತಮ್ಮ ವಿರುದ್ಧದ ಅಪವಾದಗಳನ್ನು ಮೆಟ್ಟಿನಿಲ್ತಾರಾ? ಮತದಾರರೇ ಉತ್ತರಿಸಬೇಕಿದೆ.
ವಿಶೇಷ ವರದಿ : ಶ್ರೀಕಾಂತ್‌ ಕುಬಕಡ್ಡಿ