ಟೆಕ್ಕಿ ಪತ್ನಿಯ ಅಶ್ಲೀಲ ಫೋಟೊ ತೆಗೆಯೋಕೆ ಗಂಡನೇ ಕೊಟ್ಟ ಸುಪಾರಿ..!?

ಬೆಂಗಳೂರು: ಡೈವೋರ್ಸ್ ಕೊಡಲು ನಿರಾಕರಿಸಿದ ಪತ್ನಿಯ ಅಶ್ಲೀಲ ಫೋಟೊಗಳನ್ನ ತೆಗೆದುಕೊಡುವಂತೆ ಗಂಡನೇ ಸುಪಾರಿ ನೀಡಿರುವ ವಿಲಕ್ಷಣ ಪ್ರಕರಣ ನಗರದ ಕುಮಾರಸ್ವಾಮಿ ಲೇಔಟ್ ಬಳಿಯ ವಿಠಲನಗರದಲ್ಲಿ ನಡೆದಿದೆ.

ವಿಠಲನಗರ ನಿವಾಸಿಯಾದ ಮಹಿಳೆ, ಖಾಸಗಿ ಕಂಪನಿ ಉದ್ಯೋಗಿ ಶ್ರೀಕಾಂತ್ ಎಂಬುವವರನ್ನು ಐದು ವರ್ಷಗಳ ಹಿಂದೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ವಿವಾಹವಾಗಿದ್ದರು. ನಂತರ ಬೆಂಗಳೂರಲ್ಲಿ ವಾಸವಿದ್ದರು. ಮೊದಲ ಮೂರು ವರ್ಷದ ದಾಂಪತ್ಯ ಜೀವನ ಸರಿಯಾಗೇ ಇತ್ತು. ನಂತರದ ದಿನಗಳಲ್ಲಿ ಕೌಟುಂಬಿಕ ಕಲಹ ಉಂಟಾಗಿ ಶ್ರೀಕಾಂತ್, ಪತ್ನಿಯನ್ನ ತವರು ಮನೆಯಿಂದ ಹಣ, ಒಡವೆ ತೆಗೆದುಕೊಂಡು ಬಾ ಅಂತಾ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದ. ಇಲ್ಲವಾದಲ್ಲಿ ವಿವಾಹ ವಿಚ್ಛೇದನ ನೀಡು ಅಂತಾ ಪೀಡಿಸತೊಡಗಿದ್ದ. ಈ ಬಗ್ಗೆ ಕಳೆದ ವರ್ಷ ಏಪ್ರಿಲ್‌ನಲ್ಲಿ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಮಹಿಳೆ ಗಂಡನ ವಿರುದ್ಧ ದೂರು ನೀಡಿದ್ದರು. ಬಳಿಕ ಇನ್ನುಮುಂದೆ ಹೆಂಡತಿಗೆ ಕಾಟ ಕೊಡಲ್ಲ ಅಂತಾ ಪೊಲೀಸರ ಮುಂದೆ ಶ್ರೀಕಾಂತ್ ತಪ್ಪೊಪ್ಪಿಕೊಂಡಿದ್ದ. ಇದರಿಂದ ಪತ್ನಿ ದೂರು ಹಿಂಪಡೆದಿದ್ದರು.

ಸುಪಾರಿ ಕೊಟ್ಟ ಪತಿರಾಯ..!
ಇಷ್ಟಾದ್ರೂ ತನ್ನ ಬುದ್ಧಿ ಬದಲಿಸದ ಶ್ರೀಕಾಂತ್​, ಪತ್ನಿ ನೇರವಾಗಿ ಕೇಳಿದ್ರೆ ಡೈವೋರ್ಸ್ ನೀಡಲ್ಲ ಎಂದು, ಮಾರ್ಚ್ 26ರಂದು ತನ್ನ ಅಪಾರ್ಟ್ಮೆಂಟ್  ಕೀಯನ್ನ ಅಪರಿಚಿತ ವ್ಯಕ್ತಿಗೆ ನೀಡಿದ್ದ. ತನ್ನ ಪತ್ನಿಯ ಅಶ್ಲೀಲ ಭಾವಚಿತ್ರಗಳನ್ನ ತೆಗೆದುಕೊಂಡು ಬರುವಂತೆ ಸುಪಾರಿ ಕೊಟ್ಟಿದ್ದ. ಶ್ರೀಕಾಂತ್​ನಿಂದ ಸುಪಾರಿ ಪಡೆದ ಆರೋಪಿಯು ಮಹಿಳೆ  ಮನೆಯಲ್ಲಿ ಒಬ್ಬರೇ ಇರುವಾಗ ಅವರ ಭಾವಚಿತ್ರಗಳನ್ನ ತೆಗೆಯಲು ಪ್ರಯತ್ನಿಸಿದ್ದ. ಕೂಡಲೇ ಎಚ್ಚೆತ್ತ ಮಹಿಳೆ ಆತನನ್ನ ಹಿಡಿದು ಪ್ರಶ್ನಿಸಿದ್ದಾರೆ. ಈ ವೇಳೆ ನಿನ್ನ ಪತಿಯೇ ಈ ರೀತಿ ನಿನ್ನ ಫೋಟೊ ತೆಗೆಯುವಂತೆ ಹಣ ನೀಡಿದ್ದಾನೆ ಅಂತಾ ಬಾಯಿಬಿಟ್ಟಿದ್ದ. ಸದ್ಯ ಪತಿ ಶ್ರೀಕಾಂತ್ ವಿರುದ್ಧ ಮಹಿಳೆ ವರದಕ್ಷಿಣೆ ಕಿರುಕುಳ ಹಾಗೂ ಜೀವ ಬೆದರಿಕೆ ಆರೋಪದಡಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv