ಮನುಷ್ಯ ಮೂಗಿನಿಂದಷ್ಟೇ ಅಲ್ಲ, ನಾಲಗೆಯಿಂದಲೂ ವಾಸನೆ ಗ್ರಹಿಸಬಹುದು..!

ಸಾಮಾನ್ಯವಾಗಿ ಮನುಷ್ಯರು ವಾಸನೆಯನ್ನ ಗ್ರಹಿಸೋದು ಯಾವುದರಿಂದ ಹೇಳಿ..? ಅರೇ ಮನುಷ್ಯರೇನ್ರೀ, ಯಾವುದೇ ಪ್ರಾಣಿ ಕೂಡ ವಾಸನೆಯನ್ನ ಗ್ರಹಿಸೋದು ಮೂಗಿನಿಂದಲೇ ಅಂತ ನೀವು ಹೇಳಬಹುದು. ಆದ್ರೆ, ಕೇವಲ ಮೂಗಿನಿಂದಷ್ಟೇ ಅಲ್ಲ, ನಿಮ್ಮ ನಾಲಗೆಯಿಂದಲೂ ವಾಸನೆಯನ್ನ ಗ್ರಹಿಸಬಹುದಂತೆ. ಹೀಗಂತ ಹೊಸ ವರದಿಯೊಂದು ಹೇಳಿದೆ.

ಅಮೆರಿಕಾ ಮೂಲದ ಸಂಶೋಧಕರು ಇಂಥದ್ದೊಂದು ವರದಿಯನ್ನ ನೀಡಿದ್ದಾರೆ. ಮಾನೆಲ್ ಸೆಂಟರ್​ನ ವಿಜ್ಞಾನಿಗಳು ಈ ವಿಷಯವನ್ನ ಕಂಡು ಹಿಡಿದಿದ್ದು, ಮೂಗಿನಲ್ಲಿರುವ ವಾಸನೆಯನ್ನ ಗ್ರಹಿಸುವ ಶಕ್ತಿಯುಳ್ಳ ಓಲ್ ಫ್ಯಾಕ್ಟರಿ ರೆಸೆಪ್ಟರ್ಸ್, ಮನುಷ್ಯನ ನಾಲಗೆಯ ಟೇಸ್ಟ್ ಸೆಲ್ಸ್​ನಲ್ಲೂ ಇರುತ್ತವೆ ಅಂತ ಹೇಳಿದ್ದಾರೆ. ಈ ಮೂಲಕ ರುಚಿ ಹಾಗೂ ವಾಸನೆ ಎರಡೂ ನಾಲಗೆಯಿಂದಲೇ ತಿಳಿಯುತ್ತೆ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಈ ಹಿಂದೆ ಇದು ಮೆದುಳಿನಲ್ಲಿ ಆಗುವ ಪ್ರಕ್ರಿಯೆ ಅಂತ ಹೇಳಲಾಗಿತ್ತು.

ಸೆಲ್ ಬಯಾಲಜಿಸ್ಟ್, ಮೆಹ್ಮೆಟ್ ಹಕನ್ ಒಡೆನರ್ ನೇತೃತ್ವದ ತಂಡ ಇದನ್ನ ಕಂಡು ಹಿಡಿದಿದ್ದು, ಇದಕ್ಕೆ ಪ್ರೇರಣೆ ಒಡೆನರ್​ರ 12 ವರ್ಷದ ಮಗನಂತೆ. ಹಾವುಗಳು ತಮ್ಮ ನಾಲಗೆಯನ್ನ ಚಾಚುವುದರಿಂದ, ಅವು ವಾಸನೆಯನ್ನ ಗ್ರಹಿಸಬಹುದೇ ಅಂತ ಕೇಳಿದ್ದನಂತೆ. ಈ ಪ್ರಶ್ನೆಯನ್ನ ಮಗ ಕೇಳಿದ್ದರಿಂದಲೇ ಒಡೆನರ್, ಸಂಶೋಧನೆ ಕೈಗೊಂಡು, ಹೊಸ ವಿಚಾರವನ್ನ ಕಂಡು ಹಿಡಿದಿದ್ದಾರೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv