ಕೊಪ್ಪಳದ ಶ್ರೀಮಂತ ದೇವತೆ ..!

ಕೊಪ್ಪಳ: ಕೇವಲ ಕರ್ನಾಟಕವಷ್ಟೇ ಅಲ್ಲದೇ ರಾಜ್ಯಗಳಿಂದಲೂ ಭಕ್ತರನ್ನು ತನ್ನತ್ತ ಸೆಳೆಯುತ್ತಿರುವ ಐತಿಹಾಸಿಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಹುಲಿಗೆಮ್ಮ ದೇವಿ ದೇವಾಲಯ. ದೇಶ ವಿದೇಶಗಳಲ್ಲಿ ಶ್ರೀಮಂತ ದೇವತೆ ಅಂತಾನೇ ಪ್ರಸಿದ್ಧಿ ಪಡೆಯುತ್ತಿದ್ದಾಳೆ. ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದಲ್ಲಿರುವ ಶ್ರೀ ಹುಲಿಗೆಮ್ಮ ದೇವಿಯ ದೇವಸ್ಥಾನ ಮೊದಲ ಬಾರಿಗೆ ಐತಿಹಾಸಿಕ ದಾಖಲೆ ಸೃಷ್ಟಿಸಿದೆ. ದೇವಸ್ಥಾನಕ್ಕೆ ಇದುವರೆಗಿನ ದಾಖಲೆಗಳಲ್ಲೇ ಅತ್ಯಧಿಕ ಆದಾಯ ಬಂದಿದ್ದು, ಒಂದು ವರ್ಷದಲ್ಲಿ ಬರೋಬ್ಬರಿ 8.50 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ.
ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಒಳಪಡುವ ಈ ದೇವಾಲಯಕ್ಕೆ ರಾಜ್ಯವೂ ಸೇರಿದಂತೆ ಸುತ್ತಮುತ್ತಲಿನ ರಾಜ್ಯಗಳಲ್ಲಿ ಲಕ್ಷಾಂತರ ಭಕ್ತರು ಇದ್ದಾರೆ. ಅಲ್ಲದೆ ವರ್ಷಕೊಮ್ಮೆ ನಡೆಯುವ ಜಾತ್ರೆಗೆ ವಿದೇಶಗಳಿಂದಲೂ ಲಕ್ಷಾಂತರ ಭಕ್ತರು ಹರಿದು ಬರುತ್ತಾರೆ. ದೇವಿಗೆ ಮುಡಿಪು, ಹರಕೆ ರೂಪದಲ್ಲಿ ಸಲ್ಲಿಸುವ ಕಾಣಿಕೆ, ಮನಿ ಆರ್ಡರ್, ಖಾತೆಯಿಂದ ವರ್ಗಾವಣೆ ಮಾಡುವ ದೇಣಿಗೆ ಸೇರಿದಂತೆ ದೇವಸ್ಥಾನಕ್ಕೆ ಸಂಬಂಧಿಸಿ ಕಟ್ಟಡಗಳ ಬಾಡಿಗೆ 2017-18ನೇ ಸಾಲಿನಲ್ಲಿ ಒಟ್ಟು 8,67,95,031 ರೂಪಾಯಿ ಆದಾಯ ಹರಿದು ಬಂದಿದೆ. 26 ದಿನಗಳಲ್ಲಿ ದೇವಸ್ಥಾನದಲ್ಲಿನ ಹುಂಡಿಯಲ್ಲಿ 50 ಲಕ್ಷ ರೂಪಾಯಿ ಸಂಗ್ರಹವಾದರೆ, 235 ಗ್ರಾಂ ಚಿನ್ನ, 14 ಕೆಜಿ ಬೆಳ್ಳಿಯನ್ನು ಭಕ್ತರು ಕಾಣಿಕೆ ಸಲ್ಲಿಸಿದ್ದಾರೆ. ಇದು ದೇವಸ್ಥಾನದ ಇತಿಹಾಸದಲ್ಲಿಯೇ ಅತ್ಯಧಿಕ ಆದಾಯ. ದೇವಸ್ಥಾನದ ಹುಂಡಿಯಲ್ಲಿ ಇಲ್ಲಿವರೆಗೂ 34 ಕೋಟಿ ರೂಪಾಯಿ ಸಂಗ್ರಹವಾಗಿದೆ.
ಕಳೆದ ವರ್ಷದ ದಾಖಲೆ ಪ್ರಕಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹುಂಡಿಯಲ್ಲಿ ಅತಿಹೆಚ್ಚು ಹಣ ಸಂಗ್ರಹವಾಗಿತ್ತು. ದೇವಸ್ಥಾನ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿತ್ತು. ಹುಲಿಗೆಮ್ಮದೇವಿ ದೇವಸ್ಥಾನ 5ನೇ ಸ್ಥಾನದಲ್ಲಿತ್ತು. ಆದರೆ ಈ ಬಾರಿ ಹುಲಿಗೆಮ್ಮ ದೇವಿಗೆ ದೇಣಿಗೆ ಹೆಚ್ಚಾಗಿ ಹರಿದುಬರುವ ಮೂಲಕ ರಾಜ್ಯದಲ್ಲಿ ಈ ದೇವಸ್ಥಾನ ಮೊದಲ ಸ್ಥಾನ ಅಂದ್ರೆ ತಪ್ಪಾಗಲಾರದು. ಪ್ರತಿ ಮಂಗಳವಾರ, ಶುಕ್ರವಾರ ಭಕ್ತರ ಸಂಖ್ಯೆ ಹೆಚ್ಚಾಗಿರುತ್ತದೆ. ಅಮಾವಾಸ್ಯೆ, ಹುಣ್ಣಿಮೆ, ಜಾತ್ರೆ ಸಂದರ್ಭದಲ್ಲಂತೂ ಭಕ್ತ ಸಾಗರವೇ ಹರಿದುಬರುತ್ತದೆ. 2013-14ರಲ್ಲಿ ಭೀಕರ ಬರಗಾಲದಲ್ಲೂ 5 ಕೋಟಿ ಗಡಿ ದಾಟಿ ಇತಿಹಾಸ ನಿರ್ಮಿಸಿತ್ತು. ಅಲ್ಲಿವರೆಗೂ ಕೇವಲ 1ರಿಂದ 2 ಕೋಟಿ ರೂಪಾಯಿ. ಆದಾಯ ಬರುತ್ತಿತ್ತು. ಆದರೆ 2013-14ನೇ ಸಾಲಿನಲ್ಲಿ 5,29,37,416 ರೂ, ಆದಾಯ ಬಂದಿದೆ. ನಂತರದ ವರ್ಷದಲ್ಲಿ 6 ಕೋಟಿ ರೂ. ಆದಾಯ ಬರುತ್ತಿದೆ.
ದೇವಿಗೆ ಭಕ್ತರೇ ಆದಾಯದ ಮೂಲ.
ಭಕ್ತರು ದೇವಿಗೆ ಸಲ್ಲಿಸುವ ವಿಶೇಷ ಪೂಜೆ, ಸೇವೆಗಳು, ತೀರ್ಥ, ಲಾಡು ಪ್ರಸಾದ, ದೇವಾಲಯದ ಆವರಣದ ಮಳಿಗೆಗಳ ಬಾಡಿಗೆ, ಹರಾಜು ಪ್ರಕ್ರಿಯೆ, ಕಾಣಿಕೆ, ಹುಂಡಿಗೆ ಹಾಕುವ ಕಾಣಿಕೆ, ಮನಿ ಆರ್ಡರ್ ಹಾಗೂ ಬ್ಯಾಂಕ್ ಖಾತೆಗೆ ಜಮಾ ಮಾಡುವ ಕಾಣಿಕೆ ಸೇರಿ ವಿವಿಧ ಮೂಲಗಳಿಂದ ದೇವಾಲಯಕ್ಕೆ ಈ ರೀತಿ ಆದಾಯ ಬರುತ್ತಿದೆ. ಒಟ್ಟಾರೆ ಹುಲಿಗೆಮ್ಮ ದೇವಿಗೆ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಶ್ರೀಮಂತ ದೇವಿ ಅಂತಾ ಖ್ಯಾತಿ ಪಡೆಯುತ್ತಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv