ಕುಂದಗೋಳ ಉಪ ಚುನಾವಣೆಗೆ ಜಿಲ್ಲಾಡಳಿತ ಸಂಪೂರ್ಣ ಸಜ್ಜು

ಹುಬ್ಬಳ್ಳಿ: ನಾಳೆ ನಡೆಯಲಿರುವ ಕುಂದಗೋಳ ಉಪ ಚುನಾವಣೆಗೆ ಜಿಲ್ಲಾಡಳಿತ ಸಕಲ ರೀತಿಯಲ್ಲೂ ಸಜ್ಜಾಗಿದೆ. ಹರಭಟ್ಟ ಕಾಲೇಜಿನಲ್ಲಿ ಮಾಸ್ಟರಿಂಗ್ ಕಾರ್ಯ ನಡೆಯುತ್ತಿದೆ. ಮತದಾನ ಪ್ರಕ್ರಿಯೆ ಸರಾಗವಾಗಿ ನಡೆಯೋಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ.

ಕ್ಷೇತ್ರದಲ್ಲಿರುವ ಒಟ್ಟು 1,89,435 ಮತದಾರರಿದ್ದು, ಒಟ್ಟು 214 ಮತಗಟ್ಟೆಗಳ ಸ್ಥಾಪನೆಯಾಗಿದೆ. ಕ್ಷೇತ್ರದಲ್ಲಿ 38 ಸೂಕ್ಷ್ಮ ಹಾಗೂ 33 ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಈ ಉಪಚುನಾವಣೆಯಲ್ಲಿ ಎಡಗೈ ಮಧ್ಯದ ಬೆರಳಿಗೆ ಶಾಹಿ ಹಾಕಲು ಆಯೋಗ ಸೂಚನೆ ನೀಡಿದೆ.

ಚುನಾವಣಾ ಕರ್ತವ್ಯಕ್ಕೆ 968 ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಪ್ರತಿ ಮತಗಟ್ಟೆಗೆ ಒಂದರಂತೆ ಕಂಟ್ರೋಲ್‌ ಯುನಿಟ್, ಬ್ಯಾಲೆಟ್ ಯುನಿಟ್ ಹಾಗೂ ವಿವಿಪ್ಯಾಟ್ ಒದಗಿಸಲಾಗಿದೆ. ಜೊತೆಗೆ ಹೆಚ್ಚುವರಿಯಾಗಿ 43 ಕಂಟ್ರೋಲ್‌ ಯುನಿಟ್‌, 44 ಬ್ಯಾಲೆಟ್ ಯುನಿಟ್ ಹಾಗೂ 157 ವಿವಿಪ್ಯಾಟ್ ನೀಡಲಾಗಿದೆ. 18 ಜನ ಸೆಕ್ಟರ್ ಅಧಿಕಾರಿಗಳ ನೇಮಕವಾಗಿದೆ. ತಾಂತ್ರಿಕ ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ಬಿಇಎಲ್ ಇಂಜನಿಯರ್‌ಗಳನ್ನೊಳಗೊಂಡ 3 ತಂಡ ರಚನೆ ಮಾಡಲಾಗಿದೆ. ಮಸ್ಟರಿಂಗ್ ಕೇಂದ್ರದಿಂದ ಮತಗಟ್ಟೆಗಳಿಗೆ ಅಧಿಕಾರಿಗಳು, ಸಿಬ್ಬಂದಿ ತೆರಳುವ ಹಾಗೂ ಮತಯಂತ್ರಗಳನ್ನು ಪೂರೈಸುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ.

ಪೊಲೀಸ್‌  ಬಂದೋಬಸ್ತ್ ವ್ಯವಸ್ಥೆ
ಮತದಾನದ ವೇಳೆ ಯಾವುದೇ ಅಹಿತರಕ ಘಟನೆಗಳು ನಡೆಯದಂತೆ ಕ್ಷೇತ್ರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಇಬ್ಬರು ಡಿ.ವೈ.ಎಸ್‌ಪಿ, 6 ಪೊಲೀಸ್ ಇನ್ಸ್ ಪೆಕ್ಟರ್, 17 ಪಿಎಸ್ಐ, 41 ಎಎಸ್ಐ, 114 ಮುಖ್ಯಪೇದೆಗಳು, 144 ಪೊಲೀಸ್ ಕಾನ್ಸ್ ಟೇಬಲ್ ಗಳು, 216 ಗೃಹರಕ್ಷಕ ದಳ ಸಿಬ್ಬಂದಿ ಮತ್ತು 68 ಜನ ಅರೆಸೇನಾಪಡೆಗಳ ನಿಯೋಜನೆ ಮಾಡಲಾಗಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv