ಕೋರ್ಟ್ ಆದೇಶವನ್ನೇ ಗಾಳಿಗೆ ತೂರಿದ ಸಾಯಿಮಂದಿರ ಆಡಳಿತ..!

ಹುಬ್ಬಳ್ಳಿ: ನಗರದ ಶ್ರೀ ಸಾಯಿಮಂದಿರದ ಆಡಳಿತ ಮಂಡಳಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದು, ಜಿಲ್ಲಾ ಪ್ರಧಾನ ನ್ಯಾಯಾಲಯದ ಆದೇಶವನ್ನೇ ಗಾಳಿಗೆ ತೂರಿದೆ ಎಂದು ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ದೀಪಕ ಜಾಧವ್​ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂದಿರದ ಆಡಳಿತ ಮಂಡಳಿ ಪಬ್ಲಿಕ್ ಟ್ರಸ್ಟ್ ಕಮಿಟಿ ರಚನೆ ಮಾಡಬೇಕು. ಅಲ್ಲದೇ, ಕಮಿಟಿ ರಚಿಸುವವರೆಗೂ ಯಾವುದೇ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಬಾರದು ಅಂತಾ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಮಿತಿ ಒತ್ತಾಯಿಸಿತ್ತು.
ಮಧ್ಯಂತರ ತಡೆಯಾಜ್ಞೆಯಿದ್ದರೂ …
ಅಷ್ಟಕ್ಕೆ ಸುಮ್ಮನಿರದ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಮಿತಿ ಧಾರವಾಡ ಜಿಲ್ಲಾ ನ್ಯಾಯಾಲಯದಿಂದ ತಡೆಯಾಜ್ಞೆಯನ್ನೂ ತಂದಿತ್ತು. ಕಳೆದ ಎಪ್ರಿಲ್ 03 ರಂದು ಜಿಲ್ಲಾ ಪ್ರಧಾನ ನ್ಯಾಯಾಲಯ ಈ ಕುರಿತಂತೆ ಮಧ್ಯಂತರ ತಡೆಯಾಜ್ಞೆಯನ್ನೂ ನೀಡಿತ್ತು. ತಡೆಯಾಜ್ಞೆಯಲ್ಲಿ ಜಿಲ್ಲಾ ನ್ಯಾಯಾಲಯ ಮಂದಿರ ಆಡಳಿತ ಮಂಡಳಿಗೆ ಯಾವುದೇ ರೀತಿಯ ಸಭೆಗಳನ್ನು ನಡೆಸದಂತೆ ಸ್ಪಷ್ಟವಾಗಿ ಹೇಳಿತ್ತು.
ನ್ಯಾಯಾಲಯದ ಆದೇಶವನ್ನೆ ಧಿಕ್ಕರಿಸಿ, ಮಂದಿರದ ಆಡಳಿತ ಮಂಡಳಿಯು ಸರ್ವ ಸದಸ್ಯರ ಸಾಮಾನ್ಯ ಸಭೆ ಕರೆದಿದೆ ಎಂದು ದೀಪಕ್​ ಜಾಧವ್ ಹೇಳಿದ್ದಾರೆ. ಇದೇ ಜುಲೈ 8ನೇ ತಾರೀಖಿನಂದು ಮಂದಿರ ಆಡಳಿತ ಮಂಡಳಿ ಸರ್ವ ಸದಸ್ಯರ ಸಭೆ ಕರೆದು ನ್ಯಾಯಾಲಯಕ್ಕೆ ಅಗೌರವ ತೋರಿದೆ. ಸಭೆ ನಡೆಸಿರುವ ಮಂದಿರದ ಆಡಳಿತ ಮಂಡಳಿ ವಿರುದ್ಧ ಮತ್ತೊಂದು ದಾವೆ ಹೂಡಲಾಗಿದೆ ಅಂತಾ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ದೀಪಕ್ ಜಾಧವ್ ತಿಳಿಸಿದ್ದಾರೆ.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂರ್ಪಕಿಸಿ: contact@firstnews.tv