ಚಳಿ ಚಳಿ ಕಾಲ ಇನ್ನೇನು ಶುರು.. ಈ ಐದು ಆರೋಗ್ಯ ಸಮಸ್ಯೆಗಳನ್ನ ಎದುರಿಸುವುದು ಹೇಗೆ..!?

ಅಯ್ಯೋ! ಚಳಿಗಾಲ ಬಂದುಬಿಡ್ತಲ್ಲಪ್ಪಾ ಅನ್ನೋವ್ರ ಸಂಖ್ಯೆ ಕಡಿಮೆಯೇನೂ ಇಲ್ಲ. ಬೇಸಿಗೆಗಿಂತ ಈ ಚಳಿಗಾಲ ಮತ್ತು ಮಳೆಗಾಲದ ಆರೋಗ್ಯ ಸಮಸ್ಯೆಗಳು ಜನರನ್ನು ಬಹಳಷ್ಟು ಬಾಧಿಸುತ್ತದೆ. ಹಾಗಂತ ಬೇಸಿಗೆಯಲ್ಲಿ ಆರೋಗ್ಯ ಏರುಪೇರಾಗೋಲ್ವಾ ಅನ್ನಬೇಡಿ! ಆದರೆ ಚಳಿಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳು ನಿಜಕ್ಕೂ ಯಾತನಾಮಯವಾಗಿರುತ್ತದೆ. ಕೆಲವೊಮ್ಮೆ ಮಾರಣಾಂತಿಕವಾಗಿಯೂ ಇರುತ್ತದೆ. ಹಾಗಾಗಿ ಅದರ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅತ್ಯಗತ್ಯ. ಮಳೆಗಾಲದಲ್ಲಿ ಕೂಡ ‘ಚಳಿ’ ಜಾಸ್ತಿಯಾಗಿಯೂ ಚಳಿಗಾಲದ ಅನಾರೋಗ್ಯ ಕಾಡುತ್ತವೆ.

ಸದೃಢ ಯುವಕ, ಯುವತಿಯರೇ ಚಳಿಗಾಲದ ಆರೋಗ್ಯ ಸಮಸ್ಯೆಯಿಂದ ಕೆಲವೊಮ್ಮೆ ಪರಿತಪಿಸುತ್ತಾರೆ. ಇನ್ನು ಮಕ್ಕಳು ಮತ್ತು ವಯಸ್ಸಾದವರನ್ನಂತೂ ಚಳಿಗಾಲ ಹಿಂಡಿ ಹಿಪ್ಪೆಮಾಡಿಬಿಡುತ್ತದೆ.

ಆರ್ಥರೈಟಿಸ್:
ವಾತಾವರಣದಲ್ಲಿ ಟೆಂಪರೇಚರ್ ಕುಸಿಯುತ್ತಿದ್ದಂತೆ ಸಂಧಿವಾತದ (ಆರ್ಥರೈಟಿಸ್) ನೋವು ಅಧಿಕವಾಗುತ್ತದೆ.! ಶೀತ ಮತ್ತು ಒಣ ಹವೆಯಿಂದ ಅಸ್ತಮಾ ಮೇಲ್ಮಟ್ಟಕ್ಕೆ ಹೋಗುತ್ತದೆ. ಅಂದರೆ ಮೇಲಿನ ಉಸಿರಾಟದ ನಾಳದಲ್ಲಿ ಸೋಂಕು ತಗುಲುವುದು ಹೆಚ್ಚು. ಈ ಸಮಯದಲ್ಲಿ ನೆಗಡಿ, ಜ್ವರ ಕಾಯಂ ಅತಿಥಿಯಾಗಿ ಕಾಡುವುದುಂಟು. ಆದರೆ ಬಹಳಷ್ಟು ಜನ ತಿಳಿದಿರುವಂತೆ ಕೊರೆಯುವ ಚಳಿಯಿದ್ದು, ದೇಹವನ್ನು ಬೆಚ್ಚಗೆ ಇಡದಿದ್ದರೆ ಶೀತಬಾಧೆ ತಕ್ಷಣ ಕಾಡತೊಡಗುತ್ತದೆಯಂತೆ. ಆದರೆ ವಾಸ್ತವದಲ್ಲಿ ಅದು ಹಾಗಲ್ಲ. ಮೇಲಿನ ಉಸಿರಾಟದ ನಾಳದಲ್ಲಿ ವೈರಸ್​ನಿಂದ ಸೋಂಕು ಉಂಟಾಗಿ, ಶೀತಬಾಧೆ ಶುರುವಾಗುತ್ತದೆ. ಚಿಕ್ಕದಾಗಿ ಅಕ್ಷಿ ಅಂದರೂ ಸಾಕು ಈ ವೈರಸ್ ಲೀಲಾಜಾಲವಾಗಿ ಸುತ್ತಮುತ್ತ ಇದ್ದವರಲ್ಲಿ ಹರಿದುಬಿಡುತ್ತದೆ.

ಗಂಟಲು ಬೇನೆ:
ಆರಂಭದಲ್ಲಿ ಒಣಗಿದ ಗಂಟಲು ಕಾಣಿಸುತ್ತದೆ. ನಂತರ, ಗಂಟಲು ಕೆರೆತ ಶುರುವಾಗುತ್ತದೆ. ಧ್ವನಿ ಕುಗ್ಗುತ್ತದೆ. ಆಗ ಶುರುವಾಗುತ್ತದೆ ಗಂಟಲು ನೋವು. ಈ ಹಂತ ತಲುಪಿದರೆ ಗಂಟಲು ಸೋಂಕು ಬಂದಿದೆ ಎಂದೇ ಅರ್ಥ.

ಏನು ಮಾಡಬೇಕು?
ಸಾಧ್ಯವಾದಷ್ಟೂ ಬಿಸಿ ಬಿಸಿಯಾದ ದ್ರವಾಹಾರ ರೂಢಿಸಿಕೊಳ್ಳಿ. ಬೆಳಗ್ಗೆ ಮತ್ತು ಮಲಗುವ ಮುಂಚೆ ಬಿಸಿ ನೀರು, ಉಪ್ಪು ಮತ್ತು ಚಿಟಿಕೆ ಮೆಣಸಿನೊಂದಿಗೆ ಗಾರ್ಲಿಂಗ್ ಮಾಡುವುದನ್ನು ರೂಢಿಸಿಕೊಳ್ಳಿ. ಇದು ಗಂಟಲು ಸೋಂಕು ನಿವಾರಣೆಗೆ ಸಹಕಾರಿಯಾಗಿರುತ್ತೆ. ಇನ್ನು ಮೆಣಸು, ಶುಂಠಿ, ತುಳಸಿ, ಅರಿಷಿಣ, ಲವಂಗಯುಕ್ತ ಆಹಾರವನ್ನು ಚಳಿಗಾಲದಲ್ಲಿ ದಿನಂಪ್ರತಿ ಸೇವಿಸಿ.

ಅಸ್ತಮಾ:
ಇದು ಗಂಟಲನ್ನು ತೀವ್ರವಾಗಿ ಬಾಧಿಸುವ ಅನಾರೋಗ್ಯದ ಲಕ್ಷಣ. ಗಂಟಲು ಉಬ್ಬಿಕೊಂಡುಬಂದು ಉಸಿರಾಟದ ನಾಳಗಳು ಕುಗ್ಗುತ್ತವೆ. ಆಗ ಉರಿತ ಶುರುವಾಗುತ್ತದೆ. ಅಸ್ತಮಾ ಎರಡು ರೀತಿಯಲ್ಲಿ ಕಾಡುತ್ತದೆ. ಅವು ಅಲರ್ಜಿಯಿಂದ ಬಂದ ಅಸ್ತಮಾ ಮತ್ತು ಅಲರ್ಜಿಯಿಂದಲ್ಲದ ಅಸ್ತಮಾ. ಧೂಳು, ಪರಾಗ, ಬಣ್ಣಗಳ ವಾಸನೆಯಿಂದ, ಧೂಮಪಾನದಿಂದ ಹೀಗೆ ಒಬ್ಬೊಬ್ಬರಿಗೂ ಒಂದೊಂದು ರೀತಿಯ ಅಲರ್ಜಿಯಿರುತ್ತದೆ. ಇನ್ನು ಅಲರ್ಜಿಯಿಂದಲ್ಲದ ಅಸ್ತಮಾ ಹೇಗೆ ಬರುತ್ತದೆ ಅಂದ್ರೆ ಶೀತ, ಜ್ವರ, ಒತ್ತಡ, ತೀವ್ರವಾದ ಹವಾಮಾನವೂ ಇಂತಹ ಅಸ್ತಮಾಕ್ಕೆ ರಾಜಮಾರ್ಗವಾಗಿರುತ್ತದೆ. ಇವುಗಳ ತೀವ್ರತೆ ಒಬ್ಬೊಬ್ಬರಿಗೂ ಒಂದೊಂದು ಪ್ರಮಾಣದಲ್ಲಿರುತ್ತದೆ. ಚಿಕ್ಕ ಮಕ್ಕಳು ಮತ್ತು ವಯಸ್ಸಾದವರಲ್ಲಿ ಇದು ಹೆಚ್ಚಾಗಿ ಕಾಣಿಸುತ್ತದೆ.

ಪರಿಹಾರ:
ಕೈಕಾಲುಗಳನ್ನ ಚೆನ್ನಾಗಿ ತೊಳೆದುಕೊಳ್ಳಬೇಕು. ಧೂಳು, ಪರಾಗವನ್ನು ಹತ್ತಿರಕ್ಕೂ ಬಿಟ್ಟುಕೊಳ್ಳದಂತೆ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಬೇಕಾಗುತ್ತದೆ. ಆರೋಗ್ಯಪೂರ್ಣ ಡಯಟ್​ ಪಾಲಿಸಬೇಕಾಗುತ್ತದೆ. ತಾಜಾ ಹಣ್ಣು, ತರಕಾರಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಜೊತೆಗೆ ಅಸ್ತಮಾ ರೋಗಿಗಳು ನಿಮ್ಮ ವೈದ್ಯರು ಸೂಚಿಸಿರುವ ಚಿಕಿತ್ಸಾ ಕ್ರಮವನ್ನೂ ಚಾಚೂ ತಪ್ಪದೆ ಪಾಲಿಸಬೇಕಾಗುತ್ತದೆ.

ಕೀಲು ನೋವು:
ತಜ್ಞ ಮೂಳೆ ವೈದ್ಯರನ್ನು ಕೇಳಿದರೆ ಶೀತ ಹವಾಮಾನದಲ್ಲಿ ಮನುಷ್ಯನಿಗೆ ಹೆಚ್ಚು ಹೆಚ್ಚು ಶಾಖದ ಅವಶ್ಯಕತೆಯಿರುತ್ತದೆ. ರಕ್ತದ ಪರಿಚಲನೆ ಜಾಸ್ತಿಯಾಗಿರಬೇಕು. ಇವೆರಡೂ ಕೊರತೆಯಾದಲ್ಲಿ ಕೈಗಳು, ಭುಜಗಳು, ಮೊಣಕಾಲು ಕೀಲುಗಳಲ್ಲಿ ರಕ್ತದ ನಾಳಗಳು ಕುಗ್ಗಿ ನೋವು ಶುರುವಾಗುತ್ತದೆ.

ಪರಿಹಾರ:
ಇದಕ್ಕೆ ಅತ್ಯುತ್ತಮ ಔಷಧ ರಹಿತ ಚಿಕಿತ್ಸೆ ಅಂದ್ರೆ, ನಿಯಮಿತ ವ್ಯಾಯಾಮ, ಯೋಗ ಮತ್ತು ವಾಕಿಂಗ್. ಇದರಿಂದಾಗಿ ಸಹಜವಾಗಿ ನಿಮ್ಮ ದೇಹದಲ್ಲಿ ಉತ್ಪಾದನೆಯಾಗುವ ಶಾಖ ಮತ್ತು ಎನರ್ಜಿ ಕೀಲು ನೋವಿಗೆ ರಾಮಬಾಣವಾಗಿರುತ್ತೆ

ಹೃದಯಾಘಾತ:
ಶೀತ ಕಾಲದಲ್ಲಿ ದೇಹದ ತಾಪಮಾನ ಕಡಿಮೆಯಾಗಿ ಹೃದಯಾಘಾತ ಕಾಣಿಸಿಕೊಳ್ಳುವುದುಂಟು. ಇದು ವಯಸ್ಸಾದವರಲ್ಲಿ , ಶಕ್ತಿಹೀನರಲ್ಲಿ ಹೆಚ್ಚಾಗಿ ಕಾಣಿಸುವುದುಂಟು. ಹೃದಯದ ಬಡಿತ ಮತ್ತು ಹೃದಯದ ಮೇಲಿನ ಒತ್ತಡ ಹೆಚ್ಚಾದಾಗ ದೇಹವನ್ನು ಬೆಚ್ಚಗಿಡಲು ಹೃದಯ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಆಗಲೇ ಹೃದಯದ ಕಾರ್ಯವೈಖರಿಯಲ್ಲಿ ಏರುಪೇರಾಗುವುದು. ಹಾಗಾಗಿ, ಹೃದಯಾಘಾತ ಆಗುತ್ತದೆ.

ಪರಿಹಾರ:
ನಿಯಮಿತ ವ್ಯಾಯಾಮದೊಂದಿಗೆ ಕಡಿಮೆ ಫ್ಯಾಟ್ ಇರೋ ಆಹಾರ ಸೇವನೆ, ಬೆಚ್ಚಗಿನ ದಿರಿಸು ಧರಿಸುವಿಕೆ, ಅತ್ಯುತ್ತಮ ಶೂ ಮತ್ತು ಗ್ಲೌಸ್ ಅಗತ್ಯ ಬಿದ್ದಲ್ಲಿ ಧರಿಸುವುದು ಒಳಿತು.

ಇದಲ್ಲದೇ ಒಟ್ಟಾರೆಯಾಗಿ ನಿಯಮಿತ ದೈಹಿಕ ಕಸರತ್ತು, ಯೋಗ, ಸ್ವಿಮ್ಮಿಂಗ್​ ಅಂತಹ ಶ್ರಮದಾಯಕ ಕಸರತ್ತಿನಿಂದ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬಹುದು.
ಎಲ್ಲಕ್ಕಿಂತ ಮುಖ್ಯವಾಗಿ ಪದೇ ಪದೆ ಆಂಟಿಬಯಾಟಿಕ್ಸ್ ತೆಗೆದುಕೊಳ್ಳುವುದು ಮತ್ತು ಸ್ವಯಂ ಔಷಧ ಪಡೆಯುವುದನ್ನು ಅವಾಯ್ಡ್​ ಮಾಡಲೇಬೇಕು.

ವಿಶೇಷ ಬರಹ: ಸಾಧು ಶ್ರೀನಾಥ್