ಥಾಯ್ಲೆಂಡ್​ ಗುಹೆಯಿಂದ ನಾಲ್ಕು ಬಾಲಕರನ್ನ ರಕ್ಷಿಸಿದ್ದು ಹೇಗೆ..!?

ಚಿಯಾಂಗ್​ ರೈ (ಥಾಯ್ಲೆಂಡ್): 13 ಬಾಲಕರು ಮತ್ತು ಒಬ್ಬ ಕೋಚ್ ಇರುವ ‘ವೈಲ್ಡ್ ಬೋರ್’ ಸಾಕರ್​ ತಂಡವು ಆರಂಭದಲ್ಲಿ ಒಂಬತ್ತು ದಿನಗಳ ಕಾಲ ಅನ್ನಾಹಾರ ಕಾಣದೆ, ಹಗಲು ರಾತ್ರಿಗಳು ಒಂದೇ ಎಂಬಂತಹ ದುರ್ಗಮ ಪರಿಸ್ಥಿತಿಯಲ್ಲಿ ಜೀವವನ್ನ ಮುಷ್ಟಿಯಲ್ಲಿ ಹಿಡಿದು ಇಲ್ಲಿನ ಗುಹೆಯೊಂದರಲ್ಲಿ ಕಾಲ ತಳ್ಳಿತ್ತು. ಅದಾದ ನಂತರವೂ, ಬಾಹ್ಯ ಪ್ರಪಂಚದ ಜತೆ ಸಂಪರ್ಕ ಸಾಧಿಸಿದರೂ, ಇನ್ನೂ ಒಂದು ವಾರ ಕಾಲ ಗುಹೆ ವಾಸ ತಪ್ಪಲಿಲ್ಲ ಆ 14 ಮಂದಿಯ ಪುಟ್ಟ ತಂಡಕ್ಕೆ.

ಆದರೆ ನಿನ್ನೆ ಭಾನುವಾರ ಭಾರಿ ಲೆಕ್ಕಾಚಾರದ ನಡುವೆ, ನಿರೀಕ್ಷೆಗೂ ಮೊದಲೇ, ಥಾಯ್​ ನೇವಿಸೀಲ್​ ತಂಡದ ನೇತೃತ್ವದಲ್ಲಿ ರಕ್ಷಣಾ ಕಾರ್ಯ ಪಡೆಯವರು 4 ಮಕ್ಕಳನ್ನು ಗುಹೆಯಿಂದ ಹೊರಕ್ಕೆ ತಂದು, ಆಸ್ಪತ್ರೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮಧ್ಯೆ ತಂಡದ ಉಳಿದ ಸದಸ್ಯರ ರಕ್ಷಿಸುವ ಕಾರ್ಯವನ್ನು ರಕ್ಷಣಾ ಪಡೆಯವರು 17ನೆಯ ದಿನವಾದ ಇಂದು ಮುಂದುವರಿಸಿದ್ದಾರೆ. ಉಳಿದವರನ್ನೂ ಇಂದೇ ಕರೆತರುವ ಸಾಧ್ಯತೆ ಹೆಚ್ಚಾಗಿದೆ.
ಇಷ್ಟಕ್ಕೂ ನಿನ್ನೆ ಆ ಮಕ್ಕಳನ್ನ ಹೇಗೆ ಹೊರಗೆ ತಂದರು ಎಂಬುದನ್ನು ಕುತೂಹಲದಿಂದ ನೋಡಿದಾಗ..

ಒಟ್ಟು 90 ಡೈವರ್​ಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಥಾಯ್ಲೆಂಡಿನ 50 ಸ್ವಿಮ್ಮರ್​ಗಳು, ಜಗತ್ತಿನ ಇತರೆ ಭಾಗಗಳಿಂದ ಬಂದಿರುವ ಅತ್ಯಂತ ಪರಿಣತ 40 ಮಂದಿ ಸ್ವಿಮ್ಮರ್​ಗಳು ಈ ತಂಡದಲ್ಲಿದ್ದಾರೆ.
ಇವರೆಲ್ಲರೂ ತಂಡೋಪಾದಿಯಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ನಿನ್ನೆ ನಾಲ್ವರನ್ನು ಹೊರತರುವಾಗ ಒಬ್ಬೊಬ್ಬ ಬಾಲಕನಿಗೂ ಇಬ್ಬರು ಸ್ವಿಮ್ಮರ್​ಗಳನ್ನು ಸಹಾಯಕರನ್ನಾಗಿ ನಿಗದಿಪಡಿಸಲಾಗಿತ್ತು. ಒಬ್ಬ ಡೈವರ್ ಬಾಲಕನಿಗಾಗಿ ಆಕ್ಸಿಜನ್​ ಸಿಲಿಂಡರ್​ಅನ್ನು ಹೊತ್ತುಕೊಂಡು ನಿಧಾನವಾಗಿ ಮುಂದೆ ಸಾಗುತ್ತಿದ್ದರೆ ಆ ಸಿಲಿಂಡರ್​ಗೆ ಲಿಂಕ್​ ಆಗಿ, ಹಿಂದಿರುವ ಬಾಲಕ ಅದೇ ನಿಧಾನಗತಿಯಲ್ಲಿ ಮುಂದೆ ಸಾಗುತ್ತಾ ಬಂದಿದ್ದಾನೆ. ಇವರಿಬ್ಬರ ಹಿಂದೆಯೂ ಮತ್ತೂ ಒಬ್ಬ ಡೈವರ್​ ಇದ್ದು, ಆತ ಏನಾದರೂ ಹೆಚ್ಚುಕಮ್ಮಿಯಾದರೆ, ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಸಬ್​ಸ್ಟಿಟ್ಯೂಟ್​ ಆಗಿ ಅವರಿಬ್ಬರ ಹಿಂದೆ ಸಾಗುತ್ತಾ ಬಂದಿದ್ದಾನೆ. ಹೀಗೆ ಒಟ್ಟು ನಾಲ್ಕು ಮಕ್ಕಳಿಗೆ 8 ಡೈವರ್​ಗಳು ಸಾಥ್​ ನೀಡಿದ್ದು ಅವರನ್ನು ಸುರಕ್ಷಿತವಾಗಿ ಹೊರತಂದಿದ್ದಾರೆ.
90 ಮಂದಿಯ ಪೈಕಿ ಉಳಿದ ಡೈವರ್​ಗಳು ಗುಹೆಯಲ್ಲಿ ಅಲ್ಲಲ್ಲಿ ತುರ್ತು ಅನಿವಾರ್ಯಗಳನ್ನು ಎದುರಿಸಲು ಕಾದಿದ್ದರು ಎಂದು ಥಾಯ್​ ಅಧಿಕೃತ ಮೂಲಗಳು ವಿವರಿಸಿವೆ.
ಇನ್ನು ಇಂದೂ ಸಹ ಮುಂದುವರಿದಿರುವ ಕಾರ್ಯಾಚರಣೆಗೆ ಇದೇ 90 ಮಂದಿಯನ್ನು ಬಳಸಲು ನಿರ್ಧರಿಸಿಲಾಗಿದೆ. ಇವರಿಗೆಲ್ಲ ಗುಹೆಯಲ್ಲಿನ ಪರಿಸ್ಥಿತಿ ಚೆನ್ನಾಗಿ ಅರಿವಿಗೆ ಬಂದಿದ್ದು, ನಿನ್ನೆ ಮಕ್ಕಳನ್ನು ರಕ್ಷಿಸಿರುವುದೂ ಇವರ ಬೆನ್ನಿಗೆ ಇದೆ. ಹಾಗಾಗಿ ಇನ್ನೊಂದು ಹತ್ತು ಗಂಟೆಗಳಲ್ಲಿ ಅಂದರೆ ಇಂದು ರಾತ್ರಿ ವೇಳೆಗೆ ಉಳಿದ ಅಷ್ಟೂ ಮಕ್ಕಳನ್ನೂ ಗುಹೆಯಿಂದ ಹೊರತರುವ ಉತ್ಸಾಹದಲ್ಲಿ ಕಾರ್ಯಪಡೆ ಕಾರ್ಯಮಗ್ನವಾಗಿದೆ ಎಂದು ವರದಿಯಾಗಿದೆ.