ಪಾಕ್ ಜೈಲಿನಲ್ಲಿರುವ ಭಾರತೀಯ ಕೈದಿಗಳ ಸಂಖ್ಯೆ ಎಷ್ಟು ಗೊತ್ತಾ?

ನವದೆಹಲಿ: ಕುಲಭೂಷಣ್​ ಜಾದವ್​ರನ್ನ ಪಾಕಿಸ್ತಾನದ ಜೈಲಿನಿಂದ ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲೆ ಇದೀಗ ಸ್ವತಃ ಪಾಕಿಸ್ತಾನವೇ ಮತ್ತೊಂದು ಸ್ಫೋಟಕ ಅಂಶವೊಂದನ್ನ ಬಹಿರಂಗ ಪಡಿಸಿದೆ. ಅಲ್ಲಿನ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ 471 ಭಾರತೀಯ ಕೈದಿಗಳ ಪಟ್ಟಿಯನ್ನು ಪಾಕಿಸ್ತಾನ ಭಾರತಕ್ಕೆ ಹಸ್ತಾಂತರಿಸಿದೆ. ಇದಕ್ಕೆ ಪ್ರತಿಯಾಗಿ ಭಾರತದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ 249 ನಾಗರಿಕ ಕೈದಿಗಳು ಮತ್ತು 108 ಮೀನುಗಾರರ ಪಟ್ಟಿಯನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ.
2008ರಲ್ಲಿ ಪರಸ್ಪರ ಜೈಲಿನಲ್ಲಿರುವ ಕೈದಿಗಳ ಪಟ್ಟಿಯನ್ನು ಪ್ರತಿವರ್ಷದ ಜನವರಿ 1ರಂದು ಮತ್ತು ಜುಲೈ 1ರಂದು ಹಸ್ತಾಂತರಿಸಿಕೊಳ್ಳಬೇಕೆಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆ 418 ಮೀನುಗಾರರು ಮತ್ತು ಅನಧಿಕೃತವಾಗಿ ಪಾಕ್​ಗೆ ಪ್ರವೇಶಿಸಿದ್ದ 53 ಭಾರತೀಯ ಕೈದಿಗಳ ಪಟ್ಟಿಯನ್ನು ಭಾರತಕ್ಕೆ ಪಾಕಿಸ್ತಾನ ಹಸ್ತಾಂತರಿಸಿದೆ.