‘ರಮೇಶ್ ಮನವೊಲಿಸಲು ಕಾಂಗ್ರೆಸ್​ ಮುಂದಾಗಬೇಕು’ ಬಸವರಾಜ್ ಹೊರಟ್ಟಿ ಹೇಳಿಕೆ

ಹುಬ್ಬಳ್ಳಿ:  ಶಾಸಕ ರಮೇಶ್ ಜಾರಕಿಹೊಳಿಯವರು ರಾಜೀನಾಮೆ ಕೊಡಬೇಕು ಅಂತಾ ತೀರ್ಮಾನ ಮಾಡಿದ್ದಾರೆ. ಇದನ್ನು ಹಗುರವಾಗಿ ತೆಗೆದುಕೊಳ್ಳಬಾರದು, ಅವರ ಸಂಪರ್ಕದಲ್ಲಿ ಹಲವು ಶಾಸಕರು ಇರುವ ಮಾಹಿತಿ ಇದೆ ಎಂದು ನಗರದಲ್ಲಿ ಮಾಜಿ ಸಚಿವ ಬಸವರಾಜ್ ಹೊರಟ್ಟಿ ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ಅಸಮಧಾನ ಸರಿಪಡಿಸಲು ಕಾಂಗ್ರೆಸ್‌ನ ಯಾರೊಬ್ಬರು ಯಾಕೆ ಮುಂದಾಗಲಿಲ್ಲ? ಕಾಂಗ್ರೆಸ್ ನಾಯಕರ ಈ ನಡೆ ನಮಗೂ ಸರಿ ಎನಿಸುತ್ತಿಲ್ಲ ಎಂದು ಹೊರಟ್ಟಿ ಗುಡುಗಿದ್ದಾರೆ.

ಇನ್ನು ಇದೇ ವೇಳೆ ಮಾತನಾಡಿದ ಅವರು, ಮೈತ್ರಿ ನಾಯಕರು ರಮೇಶ್ ಜೊತೆ‌ ಮಾತನಾಡಬೇಕಿತ್ತು. ಆದ್ರೆ, ಈಗ ಕಾಲ‌ ಮೀರಿ ಹೋಗುತ್ತಿದೆ. ಈಗಲಾದ್ರೂ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕರು ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು. ಬಿಜೆಪಿಯವರು ಮೈತ್ರಿ ಸರ್ಕಾರ ಅಸ್ಥಿರ ಮಾಡುವುದು ಸರಿಯಲ್ಲ. ಒಂದು ವೇಳೆ ಸಂಧಾನ ಮಾಡದಿದ್ದಲ್ಲಿ ಸಾರ್ವಜನಿಕರಿಗೆ ಸರ್ಕಾರದಿಂದ ತೊಂದರೆಯಾಗುತ್ತೆ. ನಮ್ಮ ಹತ್ತಿರ ಕೂಡ ರಮೇಶ್​ ಅಸಮಧಾನ ತೋಡಿಕೊಂಡಿದ್ದಾರೆ. ನಮ್ಮನ್ನು ತುಂಬಾನೇ ನೆಗ್ಲೆಕ್ಟ್​ ಮಾಡುತ್ತಿದ್ದಾರೆ ಅಂತ ರಮೇಶ್​​ ನನಗೆ ಹೇಳಿದ್ದರು. MLA ಗಳು ರಾಜಿನಾಮೆ ನೀಡಿ ಚುನಾವಣೆಗೆ ಹೋಗುವುದು ಸರಿಯಲ್ಲ. ಸರ್ಕಾರ ಬೀಳಬೇಕಾದ್ರೆ ಕನಿಷ್ಟ 14  ಶಾಸಕರಾದ್ರು ರಾಜಿನಾಮೆ ನೀಡಬೇಕು. ಮುಂದೆ ಬೇರೆ ಪಕ್ಷ ಸರ್ಕಾರ ರಚನೆ ಮಾಡಿದ್ರೆ ಆಪರೇಷನ್ ನಡೆಯುವುದೇ.? ಎಂದು ಪ್ರಶ್ನಿಸಿದರು. ಅಲ್ಲದೇ, ಕೂಡಲೇ ಮೈತ್ರಿ‌ ಪಕ್ಷದ ನಾಯಕರು ರಮೇಶ್​ರನ್ನು ಸಮಾಧನ ಪಡಿಸಬೇಕು ಎಂದು ಹೊರಟ್ಟಿ ಕೋರಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv