ಅಮಾಯಕರ ಮೇಲೆ ಲಾಠಿಚಾರ್ಜ್​​ ಮಾಡಿದ್ರೆ ಸುಮ್ಮನಿರೋಲ್ಲ: ರೇಣುಕಾಚಾರ್ಯ

ದಾವಣಗೆರೆ: ನನ್ನ ಮೇಲೆ ಕೇಸ್ ಹಾಕಿ, ನನ್ನ ಮೇಲೆ ಲಾಠಿ ಚಾರ್ಜ್ ಮಾಡಿ. ಆದ್ರೆ ಅಮಾಯಕರ ಮೇಲೆ ಲಾಠಿ ಚಾರ್ಜ್ ಮಾಡಿದ್ರೆ, ಮೂಕದ್ದಮೆ ಹಾಕಿದ್ರೆ ನಾನು ಸುಮ್ಮನಿರುವುದಿಲ್ಲ ಎಂದು ಹೊನ್ನಾಳಿ ಮತ ಕ್ಷೇತ್ರದ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮನೆ, ಶೌಚಾಲಯ, ದೇವಸ್ಥಾನ ಕಟ್ಟೋಕೆ ಜನರಿಗೆ ಮರಳು ಸಿಗ್ತಾ ಇಲ್ಲ. ಜನ ಮರಳು ಕೊರತೆಯಿಂದ ಪರದಾಡುತ್ತಿದ್ದಾರೆ. ಜನರು ನನ್ನನ್ನು ಆಯ್ಕೆ ಮಾಡಿದ್ದಾರೆ. ಜನರ ಪರವಾಗಿ ಧ್ವನಿ ಎತ್ತುತ್ತೇನೆ. ಹೊನ್ನಾಳಿಯ ಹಳ್ಳಿಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಯಾರಾದರೂ ಮರಳು ತುಂಬೋಕೆ ಬಂದ್ರೆ ಕಾನೂನು ಕ್ರಮ ಜರುಗಿಸುತ್ತೆವೆ ಎಂದು ಬೆದರಿಸುತ್ತಿದ್ದಾರೆ.

ಮರಳು ಎತ್ತೋಕೆ ಬಂದ್ರೆ ಗಾಡಿಗಳನ್ನ ಸೀಜ್ ಮಾಡ್ತೀವಿ, ಕೇಸ್ ಹಾಕ್ತೀವಿ ಎಂದು ಪೊಲೀಸರು ಬೆದರಿಸುತ್ತಿದ್ದಾರೆ. ಜಿಲ್ಲಾ ಮಂತ್ರಿಗಳೂ ಕೂಡ ಮರಳು ಕೊಡ್ತೀವಿ ಅಂತಾ ಹೇಳಬಹುದಿತ್ತು. ಅದರ ಬದಲಾಗಿ ಕಾನೂನು ಕ್ರಮ ಜರುಗಿಸುತ್ತೇವೆ ಅಂತಾ ಹೇಳ್ತಿದಾರೆ. ಈಗಲೂ ನಾನು ಬದ್ಧ. ಜನರಿಗೋಸ್ಕರ ನಾನು ಈ ಕೆಲಸಕ್ಕೆ ಮುಂದಾಗಿದೀನಿ. ನನಗೆ ಜನ ಬೇಕು. ಜನ ನನ್ನನ್ನು ಆಯ್ಕೆ ಮಾಡಿದಾರೆ. ಜನರಿಗೆ ಮರಳು ಸಿಗ್ಲಿಲ್ಲ ಅಂದ್ರೆ ಸುಮ್ನೆ ಕೂತ್ಕೊಳೋಕೆ ಆಗುತ್ತಾ. ಜನರಿಗೆ ಮರಳು ಸಿಕ್ಕಿದೆ ಅಂದ್ರೆ ನಾನು ರಾಜಕೀಯ ನಿವೃತ್ತಿ ನೀಡುತ್ತೇನೆ. 19ನೇ ತಾರಿಖು ಬೆಳಿಗ್ಗೆ 10.30ಕ್ಕೆ ಜನರಿಗೆ ಮರಳು ವಿತರಿಸಲು ನಾನು ಹೊಳೆಗೆ ಇಳಿಯುತ್ತೆನೆ ಎಂದು ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv