ಸೊಳ್ಳೆ ಕಚ್ಚಿದಾಗ ಆಗೋ ನವೆ, ಕಲೆ ಹೋಗಲಾಡಿಸೋಕೆ ಹೀಗೆ ಮಾಡಿ!

ಮಳೆಗಾಲ ಶುರುವಾಗೋ ಸಮಯ. ಮಳೆಗಾಲ ಅಂದ್ಮೇಲೆ ಕೇಳಬೇಕೆ? ಸಂಜೆಯಾಗ್ತಿದ್ದಂತೆ ಸೊಳ್ಳೆಕಾಟ ಶುರುವಾಗುತ್ತೆ. ಅದ್ರಲ್ಲೂ ಕೆಲವರಿಗೆ ಸೊಳ್ಳೆ ಕಚ್ಚಿದ್ಮೇಲೆ ಉಂಟಾಗೋ ಅಲರ್ಜಿ, ಕೆರೆತ ಹೈರಾಣಾಗಿಸುತ್ತೆ. ಮೈ ಮೇಲೆ ಕಲೆಗಳನ್ನ ಉಳಿಸುತ್ತೆ. ಹಾಗಿದ್ರೆ ಸೊಳ್ಳೆ ಕಚ್ಚಿದ್ಮೇಲೆ ಉಂಟಾಗೋ ಉರಿ, ನವೆ ಹಾಗೂ ಕಲೆಗಳನ್ನ ಹೋಗಲಾಡಿಸೋಕೆ ಹೀಗೆ ಮಾಡಿ.

ಲೋಳೆಸರ(ಆಲೋವೇರಾ): ಲೋಳೆಸರದ ರಸವನ್ನ ತೆಗೆದು ಸೊಳ್ಳೆ ಕಚ್ಚಿದ ಜಾಗಕ್ಕೆ ಹಚ್ಚಿ ಒಣಗೋಕೆ ಬಿಡಿ. ನಂತ್ರ ತಣ್ಣಗಿನ ನೀರಲ್ಲಿ ತೊಳೆಯಿರಿ. ದಿನಕ್ಕೆ 2- 3 ಬಾರಿ ಹೀಗೆ ಮಾಡಿದ್ರೆ ಉರಿ ಕಡಿಮೆಯಾಗುತ್ತದೆ.

ಟೂತ್‌ಪೇಸ್ಟ್ : ಸಣ್ಣ ಪ್ರಮಾಣದಲ್ಲಿ ಟೂತ್‌ಪೇಸ್ಟ್‌ ತೆಗೆದುಕೊಂಡು ಸೊಳ್ಳೆ ಕಚ್ಚಿದ ಜಾಗಕ್ಕೆ ಹಚ್ಚಿ ಕೆಲ ಸಮಯದ ನಂತ್ರ ತೊಳೆಯಿರಿ. ಸಾಮಾನ್ಯಾವಾಗಿ ಟೂತ್‌ಪೇಸ್ಟ್‌ನಲ್ಲಿ ಮೆಂತಾಲ್ ಹಾಗೂ ಪೆಪ್ಪರ್‌ಮೆಂಟ್ ಫ್ಲೇವರ್‌ ಇರೋದ್ರಿಂದ ಚರ್ಮ ಊದಿಕೊಳ್ಳೋದನ್ನ ತಗ್ಗಿಸಿ, ತಣ್ಣಗಿನ ಅನುಭವ ಕೊಡೋದ್ರ ಜೊತೆಗೆ ನವೆ ಕಡಿಮೆ ಮಾಡುತ್ತೆ.

ಟೀ ಟ್ರಿ ಆಯಿಲ್: ಸೊಳ್ಳೆ ಕಡಿದ ಚರ್ಮದ ಭಾಗಕ್ಕೆ ಟೀ ಟ್ರೀ ಆಯಿಲ್‌ ಹಚ್ಚಿ ಕೆಲ ಹೊತ್ತು ಮಸಾಜ್ ಮಾಡೋದ್ರಿಂದ ಉರಿ, ಕಡಿತ ಕಡಿಮೆಯಾಗುತ್ತದೆ. ದಿನಕ್ಕೆರೆಡು ಬಾರಿ ಹೀಗೆ ಮಾಡಿ. ಟೀ ಟ್ರೀ ಆಯಿಲ್ ಇಲ್ಲದಿದ್ರೆ ಸಿಂಪಲ್‌ ಆಗಿ ಕೊಬ್ಬರಿ ಎಣ್ಣೆ ಕೂಡ ಬಳಸಬಹುದು.

ಆಪಲ್ ಸೈಡರ್ ವಿನೆಗರ್: 1 ಟೇಬಲ್ ಸ್ಪೂನ್ ಆ್ಯಪಲ್ ಸೈಡರ್ ವಿನೆಗರ್‌ಗೆ 1 ಟೇಬಲ್‌ ಸ್ಪೂನ್‌ ತಣ್ಣಗಿನ ನೀರು ಸೇರಿಸಿ. ಸಣ್ಣ ಹತ್ತಿಯುಂಡೆಯಿಂದ ಸೊಳ್ಳೆ ಕಡಿದ ಜಾಗಕ್ಕೆ 2 ಬಾರಿ ಹಚ್ಚಿ ಕೆಲ ಹೊತ್ತಿನ ನಂತ್ರ ತೊಳೆಯಿರಿ.

ಜೇನುತುಪ್ಪ: ಉರಿಯುಂಟಾಗುತ್ತಿರೋ ಚರ್ಮದ ಭಾಗಕ್ಕೆ ಸ್ಪಲ್ಪ ಜೇನುತುಪ್ಪ ಹಚ್ಚಿ ಕೆಲ ಹೊತ್ತಿನ ನಂತ್ರ ತಣ್ಣೀರಿನಿಂದ ತೊಳೆಯಿರಿ. ಇದು ಚರ್ಮ ಊದಿಕೊಳ್ಳೋದನ್ನ ತಪ್ಪಿಸುತ್ತದೆ.

ನಿಂಬೆಹಣ್ಣು: ಹಲವು ಆರೋಗ್ಯಕಾರಿ ಪ್ರಯೋಜನಗಳಿರೋ ನಿಂಬೆಹಣ್ಣು ಸೊಳ್ಳೆ ಕಡಿತದಿಂದ ಉಂಟಾಗೋ ಅಲರ್ಜಿಗೆ ರಾಮಬಾಣ. ನಿಂಬೆಹಣ್ಣನ್ನ ಅರ್ಧ ಕಟ್ ಮಾಡಿ, ಚರ್ಮಕ್ಕೆ ವೃತ್ತಾಕಾರಾವಾಗಿ ಮಸಾಜ್ ಮಾಡಿ, 5 ನಿಮಿಷದ ನಂತ್ರ ತಣ್ಣೀರಿನಿಂದ ತೊಳೆಯಿರಿ.

ಐಸ್‌ಕ್ಯೂಬ್: ಸೊಳ್ಳೆ ಕಚ್ಚಿದ ನಂತರ ನವೆ ಕಡಿಮೆಯಾಗೋಕೆ ಐಸ್‌ ತುಂಡುಗಳಿಂದ ಚರ್ಮಕ್ಕೆ ರಬ್ ಮಾಡಿ. ಇದ್ರಿಂದ ರಕ್ತಸಂಚಾರವಾಗಿ ನವೆ ಕಡಿಮೆಯಾಗುತ್ತೆ. ಹಾಗೇ ಚರ್ಮದ ಮೇಲೆ ಕೆರೆತದಿಂದ ಉಂಟಾದ ಕಲೆಗಳು ಉಳಿಯೋದಿಲ್ಲ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv