ಪ್ರಧಾನಿ ಮೋದಿ ಕಳ್ಳನಾಗಿದ್ದರೆ, ನೀವು..? ರಾಹುಲ್​ ವಿರುದ್ಧ ಬಿಜೆಪಿ ನಾಯಕನ ಕೀಳು ಹೇಳಿಕೆ

ಶಿಮ್ಲಾ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ಬಿಜೆಪಿ ಮುಖ್ಯಸ್ಥ ಸತ್ಪಾಲ್ ಸಿಂಗ್ ಸಟ್ಟಿ, ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿಯನ್ನ ಖಂಡನಾರ್ಹ ಪದಗಳಿಂದ ನಿಂದಿಸಿರುವ ವಿಡಿಯೋ ತುಣುಕು ವೈರಲ್ ಆಗಿದೆ.

ಶಿಮ್ಲಾ ಲೋಕಸಭೆ ಕ್ಷೇತ್ರದ ಬಿಡ್ಡಿ ಪಟ್ಟಣದಲ್ಲಿ ಮತದಾರರನ್ನ ಉದ್ದೇಶಿಸಿ ಸತ್ಪಾಲ್ ಸಿಂಗ್ ಇತ್ತೀಚೆಗೆ ಮಾತನಾಡಿದ್ದರು. ಈ ವೇಳೆ ರಾಹುಲ್ ಗಾಂಧಿ, ಪ್ರಧಾನಿ ಮೋದಿಯನ್ನ ಚೌಕಿದಾರ್ ಚೋರ್​ (ಕಾವಲುಗಾರ ಕಳ್ಳ) ಅಂತಾ ಕರೆಯುತ್ತಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದರು. ‘ಮಿಸ್ಟರ್ ರಾಹುಲ್ ಗಾಂಧಿ, ಚೌಕಿದಾರ್ ಮೋದಿ ಚೋರ್ ಎನ್ನುತ್ತಾರೆ. ರಾಹುಲ್ ಗಾಂಧಿ ಬೇಲ್ ಪಡೆದುಕೊಂಡು ಹೊರಗಿದ್ದಾರೆ. ಅವ್ರ ತಾಯಿ ಕೂಡ ಬೇಲ್ ಪಡ್ಕೊಂಡಿದ್ದಾರೆ. ಅವ್ರ ಬಾಮೈದ ಕೂಡ ಜಾಮೀನು ಪಡೆದು ಹೊರಗಿದ್ದಾರೆ. ಹೀಗಿದ್ದೂ ಇವ್ರೆಲ್ಲಾ ದೇಶದ ಪ್ರಧಾನಿಯನ್ನ ಕಳ್ಳ ಎನ್ನುತ್ತಾರೆ. ನರೇಂದ್ರ ಮೋದಿಗೆ ಯಾವುದೇ ಜಾಮೀನು ಇಲ್ಲ. ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಒಬ್ಬ ನ್ಯಾಯಾಧೀಶನಂತೆ ಇರುವ ಕಾವಲುಗಾರನನ್ನ ನೀವು ಯಾರೆಂದು ಕರೆಯುವಿರಿ? ಪಂಜಾಬಿ ವ್ಯಕ್ತಿಯೊಬ್ಬರು ಭಾರವಾದ ಸಂದೇಶವನ್ನ ನಿಮಗೆ ಭಾರವಾದ ಹೃದಯದಿಂದ ಕಳುಹಿಸಲು ಹೇಳಿದ್ದಾರೆ. ಇದನ್ನು ನಿಮಗೆ ಹೇಳಲು ನನಗೆ ಸ್ಫೂರ್ತಿಯಾಗಿದೆ. ಪ್ರಧಾನಿ ಮೋದಿ ಕಳ್ಳನಾಗಿದ್ದರೆ, ನೀವು ಆಗಿದ್ದೀರಿ .. .. .. ಅಂತಾ ನಿಂದಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಅವರು ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು, ಕಾಂಗ್ರೆಸ್​ ಸತ್ಪಾಲ್ ಸಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಹಿಮಾಚಲ ಪ್ರದೇಶದ ಕಾಂಗ್ರೆಸ್​ ವಕ್ತಾರ ನರೇಶ್ ಚೌವ್ಹಾಣ್, ಬಿಜೆಪಿ ಮುಖಂಡನ ಹೇಳಿಕೆ ಖಂಡಿಸಿ, ಕೂಡಲೇ ಅವ್ರ ತಮ್ಮ ಹೇಳಿಕೆ ಬಗ್ಗೆ ಬಹಿರಂಗ ಕ್ಷಮೆ ಕೇಳಬೇಕು. ಚುನಾವಣೆ ಆಯೋಗ ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಬೇಕು. ಅಲ್ಲದೇ ಕಾಂಗ್ರೆಸ್​ ಈ ಬಗ್ಗೆ ಕಾನೂನು ಹೋರಾಟ ಮಾಡಲಿದೆ ಅಂತಾ ಹೇಳಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv