ಸ್ಕೈವಾಕ್​​ ತುಕ್ಕು ಹಿಡಿದು ನೆಲ ಕಾಣಿಸುತ್ತಿದ್ರೂ, ಪಾದಚಾರಿಗಳಿಗೆ ಇದೇ ಮಾರ್ಗವೇ ಗತಿ..!

ತುಮಕೂರು: ಹೆದ್ದಾರಿಗಳಲ್ಲಿ ರಸ್ತೆ ದಾಟಲು ಪಾದಚಾರಿಗಳ ಅನುಕೂಲಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ಸ್ಕೈವಾಕ್​ಗಳನ್ನು ನಿರ್ಮಿಸಲಾಗುತ್ತದೆ. ಇನ್ನು ತುಮಕೂರಿನ ರಾಜ್ಯ ಹೆದ್ದಾರಿ 4ರಲ್ಲಿ ನಿರ್ಮಿಸಿರುವ ಸ್ಕೈವಾಕ್​ಗಳಲ್ಲಿ ಸಾಗುವ ಪಾದಚಾರಿಗಳು ತಮ್ಮ ಜೀವ ಬಿಗಿ ಹಿಡಿದು ಹೆದ್ದಾರಿ ದಾಟುವ ಪರಿಸ್ಥಿತಿ ಎದುರಾಗಿದೆ.
ತುಮಕೂರಿನಿಂದ ಹಾದು ಹೋಗಿರುವ ಚೆನ್ನೈ-ಮುಂಬೈ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಿರ್ಮಿಸಿರುವ ಸ್ಕೈವಾಕ್​ಗಳು ಸಂಪೂರ್ಣ ಹಾಳಾಗಿದೆ.

ನೆಲಹಾಳ್​​, ಕಳ್ಳಂಬೆಳ್ಳ ಪ್ರದೇಶ​ದಲ್ಲಿ ನಿರ್ಮಿಸಿದ ಸ್ಕೈವಾಕ್​ಗಳಲ್ಲಿ ತುಕ್ಕು ಹಿಡಿದು ಅಲ್ಲಲ್ಲಿ ದೊಡ್ಡ ರಂಧ್ರಗಳು ಬಿದ್ದಿವೆ. ಇದೇ ಸ್ಕೈವಾಕ್​​ ಬಳಸಿಕೊಂಡು ವಿದ್ಯಾರ್ಥಿಗಳು ಶಾಲೆಗೆ ತೆರೆಳುತ್ತಾರೆ. ಸ್ಕೈವಾಕ್ ಹಾಸಿರುವ​​​ ಕಬ್ಬಿಣದ ಪ್ಲೇಟ್​ಗಳಲ್ಲಿ ಅಲ್ಲ್ಲಲ್ಲಿ ರಂಧ್ರಗಳು ಬಿದ್ದ ಪರಿಣಾಮ ಅನಾಹುತ ಸಂಭವಿಸುವ ಲಕ್ಷಣಗಳು ಕಾಣಿಸುತ್ತಿವೆ.

ಈ ಸ್ಕೈವಾಕ್​​ ಬಿಟ್ಟರೇ ಬೇರೆ ಮಾರ್ಗವೇ ಇಲ್ಲ..!
ರಾಜ್ಯ ಹೆದ್ದಾರಿಯಲ್ಲಿ ರಸ್ತೆ ದಾಟಲು ಈ ಸ್ಕೈವಾಕ್​ ಬಿಟ್ಟು ಬೇರೆ ಮಾರ್ಗವಿಲ್ಲ. ಹೆದ್ದಾರಿ ಒಳಗಡೆಯಿಂದ ಪಾದಾಚಾರಿ ಹೋಗದಂತೆ ರಸ್ತೆಯ ಎರಡು ಬದಿಗಳಲ್ಲಿ ತಡಗೋಡೆಗಳನ್ನು ಹಾಕಲಾಗಿದೆ. ಅತಿವೇಗವಾಗಿ ಈ ರಸ್ತೆಗಳಲ್ಲಿ ವಾಹನಗಳು ಸಂಚರಿಸುವ ಹಿನ್ನೆಲೆಯಲ್ಲಿ ಈ ಸ್ಕೈವಾಕ್​ಗಳನ್ನು ಬಳಸುವುದು ಪಾದಚಾರಿಗಳಿಗೆ ಅನಿವಾರ್ಯವಾಗಿದೆ.

ಇತ್ತೀಚೆಗೆ ಇಲ್ಲಿನ ಹೈವೆ ಪ್ಯಾಟ್ರೋಲ್​ ಪೇದೆಯೊಬ್ಬರು ವಾಹನ ನಿಲ್ಲಿಸಿ ರಸ್ತೆ ದಾಟುವಾಗ ಹಿಂಬದಿಯಿಂದ ಅತಿವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದರು. ಇನ್ನು, ಸ್ಥಳೀಯರು ಸ್ಕೈವಾಕ್​​ ಸಮಸ್ಯೆ ಕುರಿತು ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ‌ ಅಧಿಕಾರಿಗಳಿಗೆ ಹಲವು ಬಾರಿ ಮನವಿ‌ ಮಾಡಿದರೂ ಕ್ಯಾರೆ ಎನ್ನುತ್ತಿಲ್ಲ.

ಸ್ಕೈ‌ವಾಕ್ ಬದಲಾಗಿ ಹೆದ್ದಾರಿ ‌ದಾಟಲು ಬೇರೆ ಮಾರ್ಗವಿಲ್ಲದೆ ನಿತ್ಯ ಜೀವ ಬಿಗಿ ಹಿಡಿದು ಶಾಲಾ ಮಕ್ಕಳು, ವಯೋವೃದ್ಧರು ರಸ್ತೆ ದಾಟುವಂತಾಗಿದೆ. ಕೂಡಲೇ ಸ್ಕೈವಾಕ್​​ ಅಭಿವೃದ್ಧಿಪಡಿಸಿಕೊಡಬೇಕೆಂದು ಒತ್ತಾಯಿಸಿ ಸ್ಥಳೀಯರು ಪ್ರತಿಭಟನೆಗೆ ನಿರ್ಧರಿಸಿದ್ದಾರೆ.

ವಿಶೇಷ ವರದಿ: ಹೆಬ್ಬಾಕ ತಿಮ್ಮೇಗೌಡ

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.com