ಸಂಸತ್​ನಲ್ಲಿ ರಾಹುಲ್​-ಮೋದಿ ವಾಗ್ಯುದ್ಧದ ಹೈಲೈಟ್ಸ್​​..!

ನವದೆಹಲಿ: ನಿನ್ನೆ ಸಂಸತ್​ನಲ್ಲಿ ಎನ್​ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ನಿಜಕ್ಕೂ ರಸವತ್ತಾಗಿತ್ತು ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ, ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷಗಳ ನಡುವೆ ನಿರೀಕ್ಷೆಗೂ ಮೀರಿದ ವಾಗ್ಯುದ್ಧವೇ ನಡೆದು ಹೋಯ್ತು. ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ, ಪ್ರಧಾನಿ ನರೇಂದ್ರ ಮೋದಿಗೆ ಟಾಂಗ್​ ನೀಡಲು ನಡೆದುಕೊಂಡ ರೀತಿ ಪ್ರಶಂಸೆ, ಟೀಕೆಗಳ ಸುರಿಮಳೆಗೆ ಸಾಕ್ಷಿಯಾಯ್ತು.

50 ನಿಮಿಷಗಳ ಅಬ್ಬರದ ಭಾಷಣ, ಸಿಡಿಗುಂಡಿನ ಪ್ರಶ್ನೆಗಳು, ಮೋದಿಗೆ ಬಿಗಿ ಅಪ್ಪುಗೆ ಹಾಗೂ ಸಂಸದರಿಗೆ ಕಣ್​ ಹೊಡೆದು ಚಮಕ್​ ಕೊಟ್ಟು ರಾಹುಲ್​ ಅಚ್ಚರಿ ಮೂಡಿಸಿದ್ರು. ಬಳಿಕ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಲು ನಿಂತ ಪ್ರಧಾನಿ ಮೋದಿ ಕೂಡ ಬರೋಬ್ಬರಿ 90 ನಿಮಿಷಗಳ ಕಾಲ ಮಾತಾಡಿ ವಿಪಕ್ಷಗಳಿಗೆ ಅಷ್ಟೇ ನೀಟಾಗಿ ತಿರುಗೇಟು ನೀಡಿದ್ರು. ರಾಹುಲ್​ ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿಗೆ ಹಾಕಿದ ಪ್ರಶ್ನೆಗಳೇನು..? ಮೋದಿ ಹೇಗೆಲ್ಲಾ ಅವರಿಗೆ ತಿರುಗೇಟು ನೀಡಿದ್ರು.. ಇಲ್ಲಿದೆ ಡೀಟೇಲ್ಸ್​

ರಾಹುಲ್​-ಮೋದಿ ಜಟಾಪಟಿ..
ರಾಹುಲ್​ ದಾಳಿ: ರಾಫೆಲ್ ಒಪ್ಪಂದದಲ್ಲಿ ಭಾರತ ಹಾಗೂ ಫ್ರಾನ್ಸ್​ ಸರ್ಕಾರಗಳ​ ನಡುವೆ ರಹಸ್ಯ ಷರತ್ತು ಇದೆ. ಆ ಷರತ್ತಿನಿಂದಲೇ ರಕ್ಷಣಾ ಸಚಿವರು ಒಪ್ಪಂದದ ಅಂಕಿ ಅಂಶಗಳನ್ನು ಬಹಿರಂಗಪಡಿಸಲು ನಿರಾಕರಿಸುತ್ತಿದ್ದಾರೆ. ಆದ್ರೆ ಫ್ರಾನ್ಸ್​ ಅಧ್ಯಕ್ಷರು ಮಾತ್ರ ಅಂತಹ ಯಾವುದೇ ರಹಸ್ಯ ಷರತ್ತು ಇಲ್ಲ ಎಂದಿದ್ದಾರೆ. ಪ್ರಧಾನಿ ಮೋದಿಗೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಸಾಮರ್ಥ್ಯವಿಲ್ಲ.

ಮೋದಿ ಕೌಂಟರ್: ಒಂದು ಬೇಜವಾಬ್ದಾರಿಯುತ ಆರೋಪದಿಂದಾಗಿ ಎರಡೂ ದೇಶಗಳು ರಾಫೆಲ್​ ಒಪ್ಪಂದದ ಬಗ್ಗೆ ಸ್ಪಷ್ಟನೆ ನೀಡಬೇಕಾಯಿತು. ಇಂತಹ ಬಾಲಿಶ ವರ್ತನೆ ಬೇಡ. ನಾನು ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯ ಮಾಡಲು ಹೇಗೆ ಸಾಧ್ಯ..? ಇಂದು ನಿಮ್ಮ ಕಣ್ಣುಗಳು ಹೇಗೆ ತೆರೆದವು ಹಾಗೂ ಹೇಗೆ ಮುಚ್ಚಿದವೆಂದು ಇಡೀ ದೇಶವೇ ನೋಡಿದೆ.

ರಾಹುಲ್​ ದಾಳಿ: ಆಂಧ್ರ ಪ್ರದೇಶ, ರೈತರು, ಯುವಕರು, ದಲಿತರು, ಬುಡಕಟ್ಟು ಜನ ಹಾಗೂ ಮಹಿಳೆಯರು 21ನೇ ಶತಮಾನದ ಅದ್ಭುತ ರಾಜಕೀಯ ಅಸ್ತ್ರವಾದ ಜುಮ್ಲಾ ಸ್ಟ್ರೈಕ್​ನ (ಸುಳ್ಳು ಭರವಸೆ) ಬಲಿಪಶುಗಳು.

ಮೋದಿ ಕೌಂಟರ್: ನೀವು ಸರ್ಜಿಕಲ್​ ಸ್ಟ್ರೈಕನ್ನ ಜುಮ್ಲಾ ಸ್ಟ್ರೈಕ್​ ಅಂತ ಕರೆಯುತ್ತಿದ್ದೀರಿ. ನನ್ನನ್ನು ನೀವು ಬೇಕಾದಷ್ಟು ನಿಂದಿಸಿ. ಆದರೆ ನಮ್ಮ ಸೈನಿಕರನ್ನು ಅವಮಾನಿಸುವುದನ್ನು ನಿಲ್ಲಿಸಿ.

ರಾಹುಲ್​ ದಾಳಿ: ಪ್ರಧಾನ ಮಂತ್ರಿಗಳು ಪ್ರತೀ ವರ್ಷ 2 ಕೋಟಿ ಯುವಕರಿಗೆ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ರು. ಆದ್ರೆ, 2016-17ರಲ್ಲಿ ಸೃಷ್ಟಿಯಾಗಿದ್ದು 4 ಲಕ್ಷ ಉದ್ಯೋಗ ಮಾತ್ರ.

ಮೋದಿ ಕೌಂಟರ್​: ಕಳೆದ ಒಂದು ವರ್ಷದಲ್ಲಿ 1 ಕೋಟಿ ಉದ್ಯೋಗ ಸೃಷ್ಟಿಯಾಗಿದೆ.

ರಾಹುಲ್​ ದಾಳಿ: ಮಹಿಳೆಯರು, ದಲಿತರು, ಅಲ್ಪ ಸಂಖ್ಯಾತರ ಮೇಲೆ ದಾಳಿಗಳು ಜಾಸ್ತಿಯಾಗ್ತಿದೆ. ಇದರ ಬಗ್ಗೆ ಪ್ರಧಾನಿ ಮೋದಿ ತುಟಿ ಬಿಚ್ಚುತ್ತಿಲ್ಲ. ರೈತರ ಸಾಲಮನ್ನಾ ಆಗಿಲ್ಲ. ಆದ್ರೆ, ಸಿರಿವಂತ ಉದ್ಯಮಿಗಳ ಸಾಲಮನ್ನಾ ಆಗಿದೆ.

ಮೋದಿ ಕೌಂಟರ್​: ಕಪ್ಪು ಹಣದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ಕಪ್ಪು ಹಣದ ವಿಚಾರವಾಗಿ ನನಗೆ ಹಲವರು ಶತ್ರುಗಳಾಗಿದ್ದಾರೆ. ಆದರೆ ಅದೆಲ್ಲಾ ಪರವಾಗಿಲ್ಲ. ಅಧಿಕಾರಕ್ಕೆ ಬರಲು ಇಷ್ಟೊಂದು ಆತುರವೇಕೆ. 2024ರಲ್ಲೂ ನನ್ನ ಮೇಲೆ ನೀವು ಅವಿಶ್ವಾಸ ನಿರ್ಣಯ ಮಂಡಿಸುವ ಸಾಮರ್ಥ್ಯ ಕೊಡು ಅಂತ ಆ ಶಿವನಲ್ಲಿ ಪ್ರಾರ್ಥಿಸುತ್ತೇನೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv