ಸಂಸತ್ತಿನಲ್ಲಿ ಈ ಬಾರಿ ಹೆಣ್ಮಕ್ಕಳದ್ದೆ ದರ್ಬಾರು

ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತೀ ಹೆಚ್ಚು ಸಂಖ್ಯೆಯ ಮಹಿಳಾ ಅಭ್ಯರ್ಥಿಗಳು ಲೋಕಸಭೆಗೆ ಆಯ್ಕೆಯಾಗಿದ್ದಾರೆ. ದೇಶದ 542 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 78 ಮಹಿಳಾ ಅಭ್ಯರ್ಥಿಗಳು ವಿವಿಧ ಪಕ್ಷಗಳಿಂದ ಈ ಬಾರಿ ಲೋಕಸಭೆ ಪ್ರವೇಶ ಮಾಡಿದ್ದಾರೆ. ಅಲ್ಲದೇ ಸ್ವಾತಂತ್ರ್ಯದ ಬಳಿಕ ಇದೇ ಮೊದಲ ಬಾರಿಗೆ ಶೇ.14ಕ್ಕಿಂತ ಹೆಚ್ಚು ಪ್ರಮಾಣದ ಮಹಿಳೆಯರು ಲೋಕಸಭೆ ಪ್ರವೇಶಿಸಿದಂತಾಗಿದೆ. ಈ ಪೈಕಿ ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದಿಂದ ತಲಾ 11 ಮಂದಿ ಮಹಿಳೆಯರು ಸಂಸತ್ತಿಗೆ ಆಯ್ಕೆಯಾಗಿದ್ದಾರೆ.

ಇನ್ನು ಮಹಿಳೆಯರ ಪೈಕಿ ಸೋನಿಯಾ ಗಾಂಧಿ, ಹೇಮಾ ಮಾಲಿನಿ, ಕಿರಣ್‌ ಖೇರ್‌, ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌, ಮನೇಕಾ ಗಾಂಧಿ ಹಾಗು ಸ್ಮೃತಿ ಇರಾನಿ ಘಟಾನುಘಟಿ ನಾಯಕಿಯರಾಗಿದ್ದಾರೆ. ಈ ಬಾರಿ ಅತೀ ಕಿರಿಯ ಸಂಸದೆಯಾಗಿ ಬಿಜೆಡಿಯ 25 ವರ್ಷದ  ಚಂದ್ರಾನಿ ಮುರ್ಮು ಕೂಡ ಸಂಸತ್​ ಪ್ರವೇಶಿಸಲಿದ್ದಾರೆ.

ಕರ್ನಾಟಕದಿಂದ ಇಬ್ಬರು 
ಕರ್ನಾಟಕದಿಂದ ಇಬ್ಬರು ಮಹಿಳೆಯರು ಸಂಸತ್ತು ಪ್ರವೇಶಿಸುತ್ತಿದ್ದು, ಇವರಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಮಂಡ್ಯ ಕ್ಷೇತ್ರದಿಂದ ಸುಮಲತಾ ಇದ್ದಾರೆ. ಶೋಭಾ ಕರಂದ್ಲಾಜೆ 2014ರಲ್ಲಿ ಕೂಡ ಗೆದ್ದು ಸಂಸತ್​ ಪ್ರವೇಶಿಸಿದ್ದರು.

ಇನ್ನು 2014ರ ಲೋಕಸಭಾ ಚುನಾವಣೆಯಲ್ಲಿ 64 ಮಹಿಳೆಯರು ಆಯ್ಕೆಯಾಗಿದ್ದರೆ, 2009ರಲ್ಲಿ 52 ಮಹಿಳೆಯರು ಸಂಸತ್ತಿಗೆ ಆಯ್ಕೆಯಾಗಿದ್ದರು. ಆದರೆ 2019ರ 17ನೇ ಲೋಕಸಭೆಗೆ 78 ಮಹಿಳೆಯರು ಆಯ್ಕೆಯಾಗಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv