ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಕಳೆದುಕೊಂಡ ರಾಮಚಂದ್ರಪುರ ಮಠ..!

ಬೆಂಗಳೂರು: ಧರ್ಮದತ್ತಿ ಇಲಾಖೆಯಿಂದ ಹೊರತುಪಡಿಸಿ ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು ರಾಮಚಂದ್ರಪುರ ಮಠದ ಹಸ್ತಾಂತರವನ್ನು ಹೈ ಕೋರ್ಟ್ ಇಂದು ರದ್ದು ಪಡಿಸಿದೆ. ಬರೋಬ್ಬರಿ ಹತ್ತು ವರ್ಷ ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದ ದೇವಾಲಯವನ್ನು ರಾಮಚಂದ್ರಪುರ ಮಠ ಈಗ ಕಳೆದುಕೊಂಡಿದೆ. ಬೆಂಗಳೂರು ಹೈ ಕೋರ್ಟ್ ವಿಭಾಗೀಯ ಪೀಠ ಈ ಆದೇಶ ಮಾಡಿದ್ದು, ಮುಂದಿನ ಸೆಪ್ಟಂಬರ್ 10 ರಿಂದ ದೇವಾಲಯ ಪುನಃ ಧರ್ಮದತ್ತಿ ಇಲಾಖೆಯ ಸುಪರ್ದಿಗೆ ವಾಪಸ್ಸಾಗಲಿದೆ.

ರಾಜ್ಯ ಸರ್ಕಾರದ ಹಳೆ ಆದೇಶ ರದ್ದು ಮಾಡಿದ ಕೋರ್ಟ್..!

ಈ ಹಿಂದೆ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ 2008ರ ಅಕ್ಟೋಬರ್ 12 ರಂದು ದೇವಾಲಯವನ್ನು ರಾಮಚಂದ್ರಪುರ ಮಠಕ್ಕೆ ನೀಡಿದ್ದರು. ಇದನ್ನು ಕೆಲ ಭಕ್ತಾದಿಗಳು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಅನೇಕ ಮಂದಿ ಈ ಸಂಬಂಧ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದರು. ಆದ್ರೆ ಹತ್ತು ವರ್ಷ ಕಳೆದ್ರೂ ಕೇಸ್ ಇತ್ಯರ್ಥವಾಗಿರಲಿಲ್ಲ. ಈ ಪ್ರಕರಣವನ್ನ ಇತ್ಯರ್ಥಗೊಳಿಸಲು ಸಿಜೆಯವರು ಇತ್ತೀಚೆಗೆ ವಿಭಾಗೀಯ ಪೀಠ ರಚನೆ ಮಾಡಿ ಆದೇಶ ಮಾಡಿದ್ದರು. ಆದರೆ ಬಾಲಚಂದರ್ ದಿಕ್ಷಿತ್ ಮತ್ತು ನರಹರಿ ಕೃಷ್ಣ ಹೆಗ್ಡೆ ಎಂಬುವವರು ಹೈಕೋರ್ಟ್‌ಗೆ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿ ಕೋರ್ಟ್ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಇಂದು ಮಧ್ಯಾಹ್ನ ಪ್ರಕರಣವನ್ನು ಕೈಗೆತ್ತಿಕೊಂಡ  ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ಮತ್ತು ಬಿ.ವಿ ನಾಗರತ್ನರವರ ಪೀಠ ಸರ್ಕಾರದ ಹಿಂದಿನ ಆದೇಶವನ್ನು ರದ್ದು ಮಾಡಿದೆ. ಬರೋಬ್ಬರಿ 252 ಪುಟಗಳ ತೀರ್ಪಿನಲ್ಲಿ ಈ ಹಿಂದಿನ ಸರ್ಕಾರ ಧಾರ್ಮಿಕ ದತ್ತಿ ಪಟ್ಟಿಯಿಂದ ದೇವಾಲಯವನ್ನು ಕೈ ಬಟ್ಟಿದ್ದು ಸರಿಯಲ್ಲ, ರಾಜ್ಯ ಸರ್ಕಾರದ ಹಿಂದಿನ ಆದೇಶದಲ್ಲಿ ಲೋಪದೋಷಗಳಿವೆ, ಅಲ್ಲದೇ ಇನ್ಮುಂದೆ ದೇವಾಲಯ ಧಾರ್ಮಿಕ ದತ್ತಿ ದೇಗುಲವಾಗಿ ಮುಂದುವರೆಯಲಿ ಎಂದು ಆದೇಶ ಮಾಡಿದ್ದಾರೆ.

ದೇವಾಲಯಕ್ಕೆ ಉಸ್ತುವಾರಿ ಸಮಿತಿ ರಚನೆಗೆ ಆದೇಶ..!

ದೇವಾಲಯಕ್ಕೆ ತಕ್ಷಣ ಉಸ್ತುವಾರಿ ಸಮಿತಿ ರಚನೆಯಾಗಲಿ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಉಸ್ತುವಾರಿ ನಡೆಯಲಿ. ಸಮಿತಿಯ ಸಲಹೆಗಾರರಾಗಿ ಸುಪ್ರಿಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎನ್ ಶ್ರೀಕೃಷ್ಣರವರನ್ನ ನೇಮಕ ಮಾಡಿ ಆದೇಶ ಮಾಡಿದೆ.

ಪ್ಲೀಸ್ ಮತ್ತೆ ದೇವಾಲಯವನ್ನು ಮಠಕ್ಕೆ ನೀಡಿ – ರಾಮಚಂದ್ರಪುರ ಮಠ.!

ಇದಕ್ಕೆ ರಾಮಚಂದ್ರಪುರ ಮಠದ ಪರ ವಕೀಲರಾದ ಅರುಣ್ ಶ್ಯಾಂ ಆಕ್ಷೇಪಣೆ ವ್ಯಕ್ತಪಡಿಸಿದ್ರು. ಪುನಃ ದೇವಾಲಯವನ್ನು ತಮ್ಮ ಮಠದ ಸುಪರ್ದಿಗೆ ನೀಡುವಂತೆ ಮನವಿ ಮಾಡಿದ್ರು. ಅಲ್ಲದೇ ನಮಗೆ ದಾಖಲೆಗಳನ್ನು ಸಲ್ಲಿಸಲು ಕಾಲಾವಕಾಶ ಬೇಕು ಅಂತಾ ಕೇಳಿದ್ರು. ಇದಕ್ಕೆ ಅರ್ಜಿದಾರರ ಪರ ವಕೀಲರು ಆಕ್ಷೇಪಣೆ ವ್ಯಕ್ತಪಡಿಸಿ, ದಾಖಲೆಗಳನ್ನ ನೀಡಲು ಇಷ್ಟು ಸಮಯ ಬೇಕಾಗಿರಲಿಲ್ಲ. ತೀರ್ಪು ಕೊಟ್ಟಾಗಿದೆ ತಡೆಯಬೇಡಿ ಎಂದು ಮನವಿ ಮಾಡಿದ್ರು. ಇದಕ್ಕೆ ನ್ಯಾ. ನೀವು ಆದೇಶಕ್ಕೂ ಮುನ್ನ ಆಕ್ಷೇಪಣೆ ಸಲ್ಲಿಸಬೇಕಿತ್ತು ಅಂತಾ ಹೇಳಿದ್ರು.

ಸೆಪ್ಟಂಬರ್ 10 ರಿಂದ ಉಸ್ತುವಾರಿ ಸಮಿತಿ ಅಸ್ತಿತ್ವಕ್ಕೆ..!

ಕೊನೆಗೆ ಮಠದ ವಕೀಲರ ವಾದವನ್ನು ಪುರಸ್ಕರಿಸಿ ಎರಡು ವಾರ ಮಠದವರಿಗೆ ಟೈಂ ನೀಡಿದ್ರು. ಸೆಪ್ಟಂಬರ್ 10 ರಿಂದ ಉಸ್ತುವಾರಿ ಸಮಿತಿ ಅಸ್ತಿತ್ವಕ್ಕೆ ಬರುತ್ತೆ. ಅಲ್ಲಿಯತನಕ ದೇವಾಲಯ ಮಠದ ಉಸ್ತುವಾರಿಯಲ್ಲಿಯೇ ಇರಲು ಅವಕಾಶ ನೀಡಿದ್ರು. ಅಷ್ಟರಲ್ಲಿ ದೇವಾಲಯ ಉಸ್ತುವಾರಿ ವಹಿಸಿಕೊಳ್ಳುವ ಜಿಲ್ಲಾಧಿಕಾರಿ ಸ್ತಿರಾಸ್ತಿ ಮತ್ತು ಚರಾಸ್ತಿ ಪಟ್ಟಿಯನ್ನು ತಯಾರು ಮಾಡಿ ದೇವಾಲಯದ ಲೆಕ್ಕಪತ್ರಗಳನ್ನು ನೀಡುವಂತೆ ಸೂಚಿಸಿದ್ರು.

ಮಠಕ್ಕೆ ಮುಂದೆ ಸುಪ್ರಿಂ ಒಂದೇ ಆಸರೆ..!

ಇನ್ನೂ ಮಠ ತನ್ನ ಸುಪರ್ದಿಯಿಂದ ಸದ್ಯ ದೇವಾಲಯವನ್ನು ಕಳೆದುಕೊಂಡಿದ್ದು, ಎರಡು ವಾರ ಮಾತ್ರ ಕಾಲಾವಕಾಶವಿದೆ. ಈ ನಡುವೆ ರಾಮಚಂದ್ರಪುರ ಮಠಕ್ಕೆ ಸುಪ್ರಿಂಗೆ ಹೋಗಿ ಹೈ ಕೋರ್ಟ್ ಆದೇಶಕ್ಕೆ ಸ್ಟೇ ರದ್ದು ಮಾಡಿಸಿಕೊಳ್ಳುವ ಅವಕಾಶವಿದ್ದು, ಸದ್ಯದಲ್ಲೇ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಹತ್ತು ವರ್ಷದಿಂದ ದೇವಾಲಯವನ್ನು ತನ್ನ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದ ಮಠಕ್ಕೆ ಇಂದು ಭಾರಿ ಹಿನ್ನಡೆಯಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv