ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳವೇ? ಅದಕ್ಕೆಂದೇ ಇದೆ POSH ಕಾಯ್ದೆ!

ದೇಶದೆಲ್ಲೆಡೆ ಇದೀಗ ಮಹಿಳೆಯರಿಂದ ಮಿ-ಟೂ ಅಭಿಯಾನ ನಡೆಯುತ್ತಿದೆ. ಮಹಿಳೆಯರ ಮೇಲೆ ತಾವು ಕೆಲಸ ನಿರ್ವಹಿಸುವಂತಹ ಸ್ಥಳದಲ್ಲಿ ಪುರುಷನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದವರು #MeToo ಅಭಿಯಾನದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಆರೋಪಿಸುತ್ತಿದ್ದಾರೆ.

ಅದರಲ್ಲಿ ಪ್ರಮುಖವಾಗಿ ಚಿತ್ರ ನಟಿಯರು, ಕೆಲವು ಪತ್ರಕರ್ತೆಯರು, ಕ್ರೀಡಾಪಟುಗಳು ತಮಗೆ ಆದಂತಹ ಲೈಂಗಿಕ ಕಿರುಕುಳದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತುತ್ತಿದ್ದಾರೆ. #MeToo ಅಭಿಯಾನ ಆರಂಭವಾದಾಗಿನಿಂದ ದೇಶದಲ್ಲಿ ಅನೇಕ ಲೈಂಗಿಕ ಪ್ರಕರಣಗಳು ಬೆಳಕಿಗೆ ಬಂದಿವೆ. ಬಾಲಿವುಡ್ ನಟಿ ತನುಶ್ರೀ ದತ್ತ, ನಟ, ನಾನಾ ಪಾಟೇಕರ್ ಮತ್ತು ಡ್ಯಾನ್ಸ್‌ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಮತ್ತೊಬ್ಬ ಬಾಲಿವುಡ್ ನಟಿ ಕಂಗನಾ ರಣಾವತ್ ಕ್ವೀನ್ ಚಿತ್ರದ ನಿರ್ದೇಶಕ ವಿಕಾಸ್ ಬೆಹ್ಲ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು.

ಇನ್ನು ಕೇಂದ್ರ ಸಚಿವ ಎಂ.ಜೆ ಅಕ್ಬರ್‌ ಅವರಿಗೂ ಮಿ-ಟೂ ಎಫೆಕ್ಟ್ ತಟ್ಟಿದೆ. ಖ್ಯಾತ ಗಾಯಕ ರಘು ದೀಕ್ಷಿತ್ ವಿರುದ್ಧ ತಮಿಳಿನ ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ್ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಹೀಗೆ ಹಲವಾರು ರಾಜಕಾರಣಿಗಳು, ಚಿತ್ರ ನಟರು, ಕ್ರೀಡಾಪಟುಗಳ ಮೇಲೆ ಮೀ-ಟೂ ಸರ್ಪ ಸುತ್ತಿಕೊಳ್ಳುತ್ತಿದೆ. ಇಂಥಹ ಪ್ರಕರಣಗಳ ಬಗ್ಗೆ ದೇಶದ ಕಾನೂನು ಹೇಳುವುದೇನು ಅನ್ನೋದು ಬಹಳ ಮಂದಿಗೆ ತಿಳಿದಿರಲಿಕ್ಕಿಲ್ಲ. ಅಸಲಿಗೆ ಇಂಥಹ ಪ್ರಕರಣಗಳಿಗೆ ಅಂತಾನೇ ಮಹಿಳೆಯರು ಕೆಲಸ ನಿರ್ವಹಿಸುವ ಸ್ಥಳದಲ್ಲಿ ಲೈಂಗಿಕ ಕಿರುಕುಳ ನಿಯಂತ್ರಣ ಕಾಯ್ದೆ (POSH Act)(ತಡೆ, ನಿಷೇಧ ಮತ್ತು ನಿವಾರಣೆ)2013 ಅನ್ನೋ ಕಾನೂನೇ ಇದೆ.

ಏನಿದು ಪೋಶ್(POSH) ಆ್ಯಕ್ಟ್‌..?
ಮಹಿಳೆಯರು ಕೆಲಸ ನಿರ್ವಹಿಸುವ ಸ್ಥಳದಲ್ಲಿ ಅವರು ಲೈಂಗಿಕ ಕಿರುಕುಳಕ್ಕೆ ಒಳಗಾದರೆ ಹೇಳಿಕೆ ಅಥವಾ ಅಮೌಖಿಕವಾಗಿ ಕಿರುಕುಳಕ್ಕೆ ಒಳಗಾಗಿದ್ದರೆ ಈ ಕಾಯ್ದೆಯಡಿ ಪ್ರಕರಣ ದಾಖಲಿಸಬಹುದಾಗಿದೆ. ಸುಪ್ರೀಂ ಕೋರ್ಟ್ 1997ರಲ್ಲಿ ಅಸ್ತಿತ್ವಕ್ಕೆ ತಂದಿದ್ದ ವಿಶಾಖಾ ಗೈಡ್‌ಲೈನ್ಸ್‌ಗೆ ಪರ್ಯಾಯವಾಗಿ ಕೆಲಸದ ಸ್ಥಳದಲ್ಲಿ ಮಹಿಳೆಯ ಮೇಲಿನ ಕಿರುಕುಳ (ತಡೆ, ನಿಷೇಧ ಮತ್ತು ನಿವಾರಣೆ) ಕಾಯ್ದೆ ಅಥವಾ ಪೋಶ್ ಕಾಯ್ದೆಯನ್ನು 2013ರಲ್ಲಿ ಅಂಗೀಕರಿಸಲಾಯಿತು.

 1. ಮಹಿಳೆಯರನ್ನು ದೈಹಿಕವಾಗಿ ಸ್ಪರ್ಶಿಸುವುದು, ಅತಿರೇಕದ ವರ್ತನೆ
 2. ಲೈಂಗಿಕವಾಗಿ ಸಹಕರಿಸುವಂತೆ ಬೇಡಿಕೆ ಇಡುವುದು ಅಥವಾ ಪೀಡಿಸುವುದು
 3. ಕಾಮಪ್ರಚೋದಕ ಮಾತುಗಳನ್ನು ಆಡುವುದು
 4. ಅಶ್ಲೀಲ ಚಿತ್ರಗಳನ್ನು ತೋರಿಸುವುದು
 5. ಮಾತಿನಲ್ಲಿ ಅಥವಾ ನಡವಳಿಕೆಯಲ್ಲಿ ಲೈಂಗಿಕವಾಗಿ ವರ್ತಿಸುವುದು
 6. ಒಂದಕ್ಕೆ ಪ್ರತಿಯಾಗಿ ಮತ್ತೊಂದನ್ನು ನಿರೀಕ್ಷಿಸುವಂತೆ ಲೈಂಗಿಕ ನಿವೇದನೆ

ಈ ಎಲ್ಲಾ ಅಂಶಗಳು ಈ ಕಾಯ್ದೆಯಡಿ ಅಪರಾಧವಾಗಿರುತ್ತವೆ. ಇಂಥಹ ವಿಚಾರಗಳು ಕಂಡುಬಂದರೆ ಮಹಿಳೆಯರು ಈ ಕಾಯ್ದೆಯಡಿ ದೂರು ದಾಖಲಿಸಬಹುದಾಗಿದೆ.

ಯಾರು ಪ್ರಕರಣ ದಾಖಲಿಸಬಹುದು..?
ಕಾಯ್ದೆಯ ಪ್ರಕಾರ ಯಾವುದೇ ಮಹಿಳೆ ಖಾಯಂ ಅಥವಾ ತಾತ್ಕಾಲಿಕವಾಗಿ ತಾನು ಕಾರ್ಯ ನಿರ್ವಹಿಸುವ, ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳು, ಹಣ ಸಂದಾಯ ಮಾಡುವ ಉದ್ಯೋಗಿಗಳು ಅಥವಾ ಸ್ವಯಂ ಪ್ರೇರಿತ ಉದ್ಯೋಗ ನಿರ್ವಹಿಸುತ್ತಿರುವ ಮಹಿಳಾ ಉದ್ಯೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ ಅಂತಹವರು ಪ್ರಕರಣ ದಾಖಲಿಸಬಹುದಾಗಿದೆ.

ತನಿಖೆಗೆ ಹೋಗುವುದು ಹೇಗೆ..?
ಯಾವುದೇ ಆರೋಪವನ್ನು ವಿಚಾರಣೆ ನಡೆಸಲು ಪ್ರತಿ ಉದ್ಯೋಗ ಸ್ಥಳದಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳಿರುವಲ್ಲಿ ಇಂಟರ್‌ನಲ್‌ ಕಂಪ್ಲೇಂಟ್‌ ಕಮಿಟಿ ರಚಿಸಬೇಕು. ಕಂಪನಿಯ ಎಲ್ಲ ಘಟಕ ಅಥವಾ ಕಚೇರಿಗಳಲ್ಲಿ ಸಮಿತಿ ಇರಬೇಕು. ಈ ಸಮಿತಿಯಲ್ಲಿ ಕನಿಷ್ಠ ನಾಲ್ಕು ಸದಸ್ಯರು ಇರಬೇಕು ಮತ್ತು ಅದರಲ್ಲಿ ಅರ್ಧದಷ್ಟು ಮಹಿಳಾ ಸದಸ್ಯರು ಇರಬೇಕು. ಇದರ ನೇತೃತ್ವವನ್ನು ಹಿರಿಯ ಮಹಿಳಾ ಅಧಿಕಾರಿಗೆ ವಹಿಸಬೇಕು. ಕಂಪನಿಯ ಸಿಬ್ಬಂದಿಯಲ್ಲದೇ, ಮಹಿಳಾ ಪರ ಕೆಲಸ ಮಾಡುವ ಸ್ವಯಂ ಸೇವಕರು ಅಥವಾ ವಕೀಲರನ್ನೂ ಈ ಸಮಿತಿಯಲ್ಲಿ ಸದಸ್ಯರನ್ನಾಗಿ ನೇಮಿಸಬೇಕು. ಹತ್ತಕ್ಕಿಂತ ಕಡಿಮೆ ನೌಕರರು ಇರುವ ಕಂಪನಿಗಳಲ್ಲಿ ಸಮಿತಿ ರಚಿಸುವ ಅಗತ್ಯವಿಲ್ಲ. ಇಲ್ಲಿನ ಎಲ್ಲ ದೂರುಗಳನ್ನೂ ಪ್ರತಿ ಜಿಲ್ಲೆಗಳಲ್ಲಿ ಕಾಯ್ದೆ ಅಡಿ ಇರುವ ಜಿಲ್ಲಾ ಅಧಿಕಾರಿಗಳ ಸಮಿತಿಗೆ ಸಲ್ಲಿಸಬೇಕು.

ಆರೋಪ ಸಾಬೀತಾದರೆ ಕ್ರಮ

ಮಹಿಳೆಯರೊಂದಿಗೆ ಅಸಭ್ಯ ವರ್ತನೆ ಸಾಬೀತಾದರೆ ಆಂತರಿಕ ಸಮಿತಿಯು ಕ್ರಮ ಕೈಗೊಳ್ಳಬಹುದಾಗಿದೆ.

 1. ತಪ್ಪೊಪ್ಪಿಗೆ ಪತ್ರ ಬರೆಸಿಕೊಳ್ಳಬಹುದು
 2. ಕೆಲಸದಿಂದ ತೆಗೆದು ಹಾಕಬಹುದು
 3. ಭಡ್ತಿ ತಡೆಹಿಡಿಯಬಹುದು
 4. ನೊಂದವರಿಗೆ ಪರಿಹಾರ ಕೊಡಿಸಲೂ ಬಹುದು
 5. ಮುಂದಿನ ಕಾನೂನು ಕ್ರಮಕ್ಕೂ ಶಿಫಾರಸು ಮಾಡಬಹುದು

ಉದ್ಯೋಗದಾತರ ಕರ್ತವ್ಯವೇನು..?
ಉದ್ಯೋಗದಾತ ಕಂಪನಿಗಳು ಇಂಥಹ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿವರ್ಷ ವರದಿಯನ್ನು ಸಲ್ಲಿಸಬೇಕು. ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸುವುದು ಉದ್ಯೋಗದಾತರ ಕರ್ತವ್ಯ ಅದರ ಉಲ್ಲಂಘನೆಗೆ ಸಮರ್ಪಕ ಶಿಕ್ಷೆ ವಿಧಿಸಬೇಕು ಅನ್ನುತ್ತೆ POSH ಕಾಯ್ದೆ.

ವಿಶೇಷ ಬರಹ: ಸಂಗಮೇಶ.ಆಲೂರು