ಕಳೆದ 50 ವರ್ಷದಲ್ಲೇ ಭಾರೀ ಮಳೆ, ದೇವರನಾಡಿನ ಸಚಿತ್ರ ವರದಿ..!

ಕೊಯಿಕ್ಕೋಡ್: ಕಳೆದ 50 ವರ್ಷಗಳಿಂದೀಚೆಗೆ ಸುರಿಯುತ್ತಿರುವ ಭಾರೀ ಮಳೆಗೆ ದೇವರನಾಡು ಕೇರಳ ಅಕ್ಷರಶಃ ನಲುಗಿ ಹೋಗಿದೆ. ವರುಣನ ಆರ್ಭಟಕ್ಕೆ ಸುಮಾರು 30 ಮಂದಿ ಅಸುನೀಗಿದ್ದಾರೆ. ರಾಜ್ಯದ ಉತ್ತರ ಭಾಗದಲ್ಲಿ ಹಲವಾರು ಜಿಲ್ಲೆಗಳಲ್ಲಿ ಭಾರಿ ವರ್ಷಧಾರೆಯಾಗುತ್ತಿದ್ದು, ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜನರನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸೇನಾ ಪಡೆ, ವಾಯು ಪಡೆಗಳು ಕೇರಳ ಸರ್ಕಾರದೊಂದಿಗೆ ಹರ ಸಾಹಸ ಪಡುತ್ತಿವೆ.
ಇಡುಕ್ಕಿ ಡ್ಯಾಂನಿಂದ ಭಾರೀ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗಿದ್ದು, ನದಿ ತೀರ ಪ್ರದೇಶಗಳು ಮಳೆಯಿಂದಾಗಿ ಜಲಾವೃತಗೊಂಡಿದೆ. 26 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಜಲಾಶಯ ಭರ್ತಿಯಾಗಿರುವ ಬೆನ್ನಲ್ಲೇ ಡ್ಯಾಂನ ಗೇಟ್​ಗಳನ್ನ ತೆರೆಯಲಾಗಿದೆ. ಕೇರಳದ ಉತ್ತರ ಭಾಗದಲ್ಲಿ ಸುಮಾರು 26 ಡ್ಯಾಂಗಳು ಉಕ್ಕಿ ಹರಿಯುತ್ತಿವೆ.

ಕೊಯಿಕ್ಕೋಡ್, ವಯನಾಡು, ಪಾಲಕ್ಕಾಡ್, ಇಡುಕ್ಕಿಯ ಕೆಲವು ಪ್ರದೇಶಗಳಲ್ಲಿ ಹೆಚ್ಚಾಗಿ ಭೂ ಕುಸಿತ ಹಾಗೂ ಪ್ರವಾಹ ಉಂಟಾಗಿರುವ ಬೆನ್ನಲ್ಲೇ ಈ ಪ್ರದೇಶಗಳಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಕೇಂದ್ರದ ಮೊರೆಹೋಗಿದ್ದಾರೆ. ಕೇಂದ್ರವೂ ತಕ್ಷಣ ಸೂಕ್ತವಾಗಿ ಸ್ಪಂದಿಸಿದೆ.
ಇತ್ತ ಪ್ರವಾಹದಲ್ಲಿ 22 ಜನರು ಸಾವನ್ನಪ್ಪಿರುವ ಕುರಿತು ಮುಖ್ಯಮಂತ್ರಿ ಎಚ್ ಡಿ. ಕುಮಾರಸ್ವಾಮಿ ತೀವ್ರ ವಿಷಾದ ವ್ಯಕ್ತಪಡಿಸಿದ್ದು, ಅಲ್ಲಿನ ಜನರಿಗೆ ರಾಜ್ಯದಿಂದ ನೆರವು ನೀಡಿದ್ದಾರೆ. ಕೇರಳಕ್ಕೆ 10 ಕೋಟಿ ರೂ. ಮೌಲ್ಯದ ಪರಿಹಾರ ಸಾಮಗ್ರಿ ರವಾನೆ ಮಾಡಲು ಹಾಗೂ ವೈದ್ಯರ ತಂಡ ಕಳುಹಿಸಿ ಕೊಡುವಂತೆ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್​ಗೆ ನಿರ್ದೇಶನ ನೀಡಿದ್ದಾರೆ.
ಪ್ರವಾಹಕ್ಕೆ ಸಿಲುಕಿ ಪ್ರಾಣಿಗಳೂ ಕೂಡ ಪರದಾಡ್ತಿವೆ. ಸುಮಾರು 40ಕ್ಕೂ ಅಧಿಕ ಜಿಂಕೆಗಳು ನೀರಿನಲ್ಲಿ ಕೊಚ್ಚಿ ಹೋಗ್ತಿರುವ ದೃಶ್ಯಗಳು ಕ್ಯಾಮಾರಾದಲ್ಲಿ ಸೆರೆಯಾಗಿದ್ದು, ಆ ಜಿಂಕೆಗಳು ಪ್ರವಾಹದ ಸುಳಿಯಿಂದ ಹೊರಬರಲಾರದೇ ಪರದಾಡುತ್ತಿರುವುದು ಮನ ಕಲುಕುವಂತಿದೆ.
ಕೇರಳದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವಾರು ಅವಘಡಗಳು ಸಂಭವಿಸುತ್ತಿವೆ. ಇದರ ಹಿನ್ನೆಲೆಯಲ್ಲಿ ಕೇರಳದ ತಿರುವನಂತಪುರಂ ಸೇರಿದಂತೆ ಹಲವಾರು ಕಡೆ ಭಾರಿ ಪ್ರಮಾಣದ ನಷ್ಟಗಳಾಗುತ್ತಿವೆ.