ವರುಣನ ಆರ್ಭಟಕ್ಕೆ ತತ್ತರಿಸಿದ ಬುಡಕಟ್ಟು ಜನಾಂಗ..!

ಯಾದಗಿರಿ: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು ಈ ಬಾರಿ ಉತ್ತಮ ಮಳೆಯಾಗ್ತಿದೆ. ನಿನ್ನೆ ಗಿರಿಗಳನಾಡು ಯಾದಗಿರಿಯಲ್ಲೂ ಮಳೆರಾಯ ಅಬ್ಬರಿಸಿದ್ದಾನೆ. ಬೆಳಗಿನ ಜಾವ 4 ಗಂಟೆಯಿಂದ ಜಿಲ್ಲೆಯಾದ್ಯಂತ ಸುರಿದ ಮಳೆಗೆ ಯಾದಗಿರಿ ನಗರದ ಹೊರ ವಲಯದ ಹೊಸಳ್ಳಿ ಬಳಿ ಗಿರಿನಗರದ ಜೋಪಡಿಗಳಲ್ಲಿ ವಾಸಿಸುತ್ತಿರುವ ಜನ ಕಂಗಾಲಾಗಿದ್ದಾರೆ. ನಿನ್ನೆ ತಡರಾತ್ರಿ ಸುರಿದ ಮಳೆಗೆ ಬುಡಕಟ್ಟು ಜನಾಂಗದವರ ಸಿಳ್ಳೆಕ್ಯಾತ, ಅಲೆಮಾರಿ ಜನಾಂಗದವರ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಕುಟುಂಬ ರಾತ್ರಿ ಇಡೀ ಮಳೆ ನೀರಿನಲ್ಲೇ ಕಾಲ ಕಳೆದಿದೆ. ಗುಡಿಸಲೊಳಗೆ ನೀರು ನುಗ್ಗಿದ್ದರಿಂದ ಬೆಳಗ್ಗೆ ಅಡುಗೆ ಮಾಡಲು ಕಷ್ಟಪಟ್ಟಿದ್ದಾರೆ.

ಎಲ್ಲ ಜೋಪಡಿಗಳನ್ನು ಟಾರ್ಪಲ್​ನಿಂದ ಕಟ್ಟಿಕೊಂಡಿದ್ದಾರೆ. ನಿರಂತರವಾಗಿ ಮಳೆ ಸುರಿಯುತ್ತಿರೋದ್ರಿಂದ ಹಾರಿಹೋಗಿರುವ ಹಾಳಾಗಿರುವ ಗುಡಿಸಲನ್ನು ರಿಪೇರಿ ಮಾಡಲಾಗದೇ ಪರದಾಡುತ್ತಿದ್ದಾರೆ. ಯಾದಗಿರಿಯಿಂದ ಗಿರಿನಗರಕ್ಕೆ ಹೊಗಲು ಒಂದು ಸರಿಯಾದ ರಸ್ತೆಯೂ ಇಲ್ಲ, ಮಳೆಯಿಂದಾಗಿ ಇದ್ದ ಮಣ್ಣಿನ ರಸ್ತೆ ಕೂಡ ಹಳ್ಳವಾಗಿ ಬದಲಾಗಿದೆ. ಇದ್ರಿಂದ ನಗರಕ್ಕೆ ಹೋಗಬೇಕಾದ ರಸ್ತೆ ಸಂಪರ್ಕವೇ ಇಲ್ಲದಂತಾಗಿ ಜನ ಒದ್ದಾಡುವಂತಾಗಿದೆ. ನಿನ್ನೆ ಸುರಿದ ಮಳೆಯಿಂದಾಗಿ ರಸ್ತೆ ಸಂಪರ್ಕವೇ ಇಲ್ಲದಂತಾಗಿ ದುಡಿಮೆಯೂ ಇಲ್ಲದಾಗಿದೆ. ಅಲ್ಲದೆ ಮಕ್ಕಳು ಶಾಲೆಗೂ ಹೋಗದಂತಾಗಿದೆ. ಈ ಹಿಂದೆ ಜಿಲ್ಲಾಧಿಕಾರಿಗಳಿಗೆ ಮನೆಗಳನ್ನ ಮತ್ತು ರಸ್ತೆ ನಿರ್ಮಾಣ ಮಾಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಜಿಲ್ಲಾಡಳಿ ಮಾತ್ರ ಕ್ಯಾರೆ ಎನ್ನದೆ ಭರವಸೆಯ ಉತ್ತರ ಕೊಡುತ್ತ ನುಣಿಚಿಕೊಳ್ಳುತ್ತಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv