ನಿಮ್ಮ ಊಟದ ವಿಧಾನವೇ ನಿಮ್ಮ ಆರೋಗ್ಯ ನಿರ್ಧರಿಸಲಿದೆ..!

ಎಷ್ಟೋ ಮಂದಿ ಊಟ, ತಿಂಡಿ ಮಾಡುವ ವೇಳೆ ಊಟದ ವಿಷಯ ಬಿಟ್ಟು ಬೇರೆಲ್ಲೋ ಗಮನ ಹರಿಸಿರುತ್ತಾರೆ. ಹೆಚ್ಚಿನ ಜನರು ಬೇರೆ ಕೆಲಸಗಳನ್ನು ಮಾಡುತ್ತಲೇ ಊಟ, ತಿಂಡಿ ಮುಗಿಸುವುದೂ ಇದೆ. ನಗರಗಳಲ್ಲಿ ವಾಸಿಸುವ ಮಕ್ಕಳು ಊಟ, ತಿಂಡಿ ಮಾಡುವ ವೇಳೆ ಹೆಚ್ಚಾಗಿ ಟಿವಿ ನೋಡುತ್ತಾ ಇರುವುದು ಸಾಮಾನ್ಯ. ಈ ನಡವಳಿಕೆ ಮುಂದಿನ ದಿನಗಳಲ್ಲಿ ಆ ಮಕ್ಕಳಿಗೆ ಮಧುಮೇಹ, ಸ್ಥೂಲಕಾಯದಂತಹ ಅನೇಕ ದೀರ್ಘಕಾಲದ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಇನ್ನು ಕೆಲವರು ಊಟದ ಟೇಬಲ್ ಮೇಲೆ ತಮ್ಮ ಮೊಬೈಲ್​ಗಳನ್ನಿಟ್ಟುಕೊಂಡು ಊಟ ಮಾಡುತ್ತಾರೆ. ಹೀಗೆ ಊಟ ಮಾಡುವ ವೇಳೆ ಮೆಸೇಜ್ ಕಳಿಸುತ್ತಲೋ, ವೀಡಿಯೊಗಳನ್ನು ವೀಕ್ಷಿಸುತ್ತಲೋ ಊಟ ಮಾಡುತ್ತೇವೆ. ಈ ವೇಳೆ ಊಟ ಮಾಡಲು ನಾವು ಸಾಕಷ್ಟು ಸಮಯ ತೆಗೆದುಕೊಳ್ಳುತ್ತೇವೆ.  ಇನ್ನು ಬೆಳಗಿನ ಉಪಹಾರದ ವೇಳೆ ಪತ್ರಿಕೆ ಓದುವುದು ಸಹ ಕೆಲವರ ಹವ್ಯಾಸ. ಹೀಗೆ ಓದುವುದು ಬೇಡವಾದ ತಿಂಡಿ ಬಿಡುವುದಕ್ಕೆ ಸಹ ಒಂದು ನೆಪ. ಆದರೆ ಡೈನಿಂಗ್ ಟೇಬಲ್ ಮೇಲೆ ಮೊಬೈಲ್ ಬಳಕೆ ಮಾಡುವುದಕ್ಕಿಂತ ಇದು ತುಸು ಭಿನ್ನ. ಇನ್ನು ಆಧುನಿಕ ಜೀವನ ಶೈಲಿಯಲ್ಲಿ ನಮ್ಮ ಕೆಲಸದ ಸ್ಥಳದಲ್ಲೇ ಕಂಪ್ಯೂಟರ್ ನೋಡುತ್ತಲೋ, ಸಿನಿಮಾ ವೀಕ್ಷಿಸುತ್ತಲೋ ಊಟ, ತಿಂಡಿಗಳನ್ನು ಮುಗಿಸುವುದು ಸಾಮಾನ್ಯ. ಅಲ್ಲದೆ ನಾವು ಪ್ರಯಾಣಿಸುವ ವೇಳೆ ಸಹ ಚಿಪ್ಸ್ ಅಥವಾ ಬೇರೆ ಬೇರೆ ತರಹದ ತಿಂಡಿಗಳನ್ನು ತಿನ್ನುತ್ತೇವೆ. ನಮ್ಮ ವಾಹನದಲ್ಲೇ ನಮ್ಮ ಊಟವನ್ನೂ ಹೊತ್ತೊಯ್ಯುವುದು ನಮ್ಮ ಇಂದಿನ ವಾಡಿಕೆ. ಇದು ಕೆಲವೊಮ್ಮೆ ಅನಿವಾರ್ಯ ಕೂಡ.

ಹೀಗೆನ್ನುವ ಮೂಲಕ ನಾವು ಕೆಲಸದ ನಡುವೆಯೇ ತಿನ್ನುತ್ತೇವೆ ಎಂದು ನಮ್ಮನ್ನು ನಾವು ಸಮರ್ಥಿಸಿಕೊಳ್ಳುತ್ತೇವೆ. ಆದರೆ ಒಮ್ಮೆ ಯೋಚಿಸಿ ನೋಡಿ ದಿನಕ್ಕೆ ಮೂರು ಹೊತ್ತು ತಿನ್ನಲಿಕ್ಕೆ ಒಮ್ಮೆಗೆ ಹತ್ತು ನಿಮಿಷದಂತೆ 30 ನಿಮಿಷಗಳಷ್ಟೇ ಸಾಕಲ್ಲವೆ? ದಿನಕ್ಕೆ ಊಟ ತಿಂಡಿಗಾಗಿ ಕೇವಲ 30 ನಿಮಿಷ ಬಳಸಲೂ ನಾವು ತಯಾರಿಲ್ಲ. ಹೇಗೆ ಹೇಗೋ ತಿನ್ನುವುದು, ಯಾವುದೋ ಸಮಯಕ್ಕೆ ತಿನ್ನುವುದು, ರಾತ್ರಿ ತಡವಾಗಿ ಊಟ ಮಾಡುವುದು ಈ ಎಲ್ಲವೂ ಒಂದಲ್ಲ ಒಂದು ಹಂತದಲ್ಲಿ ನಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಒಂದು ವೇಳೆ ನೀವು ದೇಹಕ್ಕೆ ಬೇಕಾದ ಎಲ್ಲಾ ಪೌಷ್ಟಿಕಾಂಶ ಒದಗಿಸಬಲ್ಲ ಉತ್ತಮ ಆಹಾರ ತಿನ್ನುತ್ತಿದ್ದರೂ ಸಹ ಸರಿಯಾದ ಕ್ರಮದಲ್ಲಿ ತಿನ್ನದೆ ಹೋದರೆ ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದರಲ್ಲಿ ಸಂದೇಹವಿಲ್ಲ.

ಊಟ-ತಿಂಡಿ ಮಾಡುವ ವೇಳೆ ಅನುಸರಿಸಬೇಕಾದ ಕ್ರಮಗಳು:

1) ಡೈನಿಂಗ್ ಟೇಬಲ್ ಮುಂದೆ ಕುರ್ಚಿಯಲ್ಲಿ ಕುಳಿತು ಊಟ ಮಾಡಿ, ಸೋಫಾ ಆಗಲಿ, ಮೃದುವಾದ ಆಸನಗಳಾಗಲಿ ಬೇಡ.

2) ಆಹಾರದ ಪರಿಮಳ, ಬಣ್ಣ, ಇವುಗಳಿಗೆ ಗಮನ ನೀಡಲು ಮೊದಲಿಗೆ ಚಿಕ್ಕ ಪ್ರಮಾಣದಲ್ಲಿ ಆಹಾರವನ್ನು ಸೇವಿಸಿ. ಇದು ನಿಮ್ಮ ದೇಹದ ಪಂಚೇಂದ್ರಿಯಗಳೂ, ತಿನ್ನುವ ಆಹಾರದ ಮೇಲೆ ಕೇಂದ್ರೀಕರಣಗೊಳ್ಳುವಂತೆ ಮಾಡುತ್ತದೆ.

3) ಊಟ, ತಿಂಡಿ ಮಾಡುವ ವೇಳೆ ಮೊಬೈಲ್ ಫೋನ್ ಬಳಕೆ ಅಥವಾ ಟಿವಿಯನ್ನ ​​​​ನೋಡುವುದನ್ನ ಮಾಡಬೇಡಿ.

4) ಗಡಿಬಿಡಿಯಾಗಿ, ಬೇಗ ಬೇಗನೇ ಊಟ ಮಾಡಿ ಮುಗಿಸುವುದು, ಊಟದ ವೇಳೆ ವಾದಗಳು ಬೇಡ. ಮನಸ್ಸಿನಲ್ಲಿ ಯಾವುದೇ ಟೆನ್ಷನ್ಸ್​ ಇರದೇ ಶಾಂತಚಿತ್ತವಾಗಿ ಊಟ ಮಾಡಿ.

5) ಪ್ರತಿ ದಿನವೂ ಸರಿಯಾದ ಸಮಯಕ್ಕೆ ಊಟ ಮಾಡಿ. ದಿನ ದಿನವೂ ಊಟದ ಸಮಯದಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳಿ.

6) ನಿಮಗೆ ತೃಪ್ತಿಯಾಗುವವರೆಗೆ ಮಾತ್ರ ಊಟ ಮಾಡಿ. ಹೊಟ್ಟೆ ಬಿರಿಯುವಷ್ಟು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

ವಿಶೇಷ ಬರಹ: ಚೆನ್ನಬಸವ ಕಾಶಿನಕುಂಟಿ


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv