ದಾಳಿಂಬೆ ಹಣ್ಣಿನಲ್ಲಿದೆ ಆರೋಗ್ಯದ ಗುಟ್ಟು..!

ದಾಳಿಂಬೆ ಹಣ್ಣನ್ನ ಇಷ್ಟ ಪಡದವರು ಯಾರೂ ಇಲ್ಲ. ಎಲ್ಲಾರು ಇಷ್ಟ ಪಟ್ಟು ತಿನ್ನುತ್ತಾರೆ ದೈವಿಕ ಹಣ್ಣು ಎಂದು ಕರೆಯಲ್ಪಡುವ ದಾಳಿಂಬೆ ಹಣ್ಣು ಹಲವಾರು ರೋಗಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಇದರಲ್ಲಿ ವಿಟಮಿನ್ ಸಿ ಮತ್ತು ಕೆ ಹೆಚ್ಚಿನ ಪ್ರಮಾಣದಲ್ಲಿದ್ದು, ಆರೋಗ್ಯವನ್ನು ವೃದ್ಧಿಸುವಲ್ಲಿ ನೆರವಾಗುತ್ತವೆ. ಅಲ್ಲದೇ  ಆ್ಯಂಟಿಆಕ್ಸಿಡೆಂಟ್​ಗಳೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ರಕ್ತನಾಳದಲ್ಲಿ ಶೇಖರಣೆಯಾದ ಕೊಬ್ಬಿನಾಂಶ ಕರಗಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ರಕ್ತಸಂಚಾರ ಸರಾಗವಾಗುವಂತೆ ಮಾಡುತ್ತದೆ. ಇದರಲ್ಲಿನ ಎಪಿಗೆಲ್ಲೋಕೆಟಕಿನ್ ಎನ್ನುವ ಆ್ಯಂಟಿ-ಆಕ್ಸಿಡೆಂಟ್ ರಕ್ತನಾಳದಲ್ಲಿನ ಬ್ಲಾಕೇಜ್​ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮುಖ್ಯವಾಗಿ ಇಂದಿನ ಯಾಂತ್ರಿಕ ಲೋಕದಲ್ಲಿ ಬಲು ಸಹಜವಾಗಿ ಬರುವ ಕ್ಯಾನ್ಸರ್ ರೋಗದ ವಿರುದ್ಧ ಹೋರಾಡುವ ಜೀವಶಕ್ತಿಯನ್ನು ಈ ದಾಳಿಂಬೆ ಹಣ್ಣು ಹೊಂದಿದೆ. ದಾಳಿಂಬೆಯು ನಿಮ್ಮ ಚರ್ಮ, ದೇಹ ಹಾಗೂ ಕೂದಲಿನ ರಕ್ಷಣೆಯಲ್ಲೂ ಮಹತ್ತರ ಪಾತ್ರ ವಹಿಸುತ್ತದೆ.

ದಾಳಿಂಬೆ ಹಣ್ಣಿನ ಬೆನಿಫಿಟ್ಸ್​ ಇಲ್ಲಿದೆ ನೋಡಿ.

1. ಹೃದಯ ಆರೋಗ್ಯವನ್ನ ವೃದ್ಧಿಸುತ್ತದೆ:
ಅಪಧಮನಿಗಳಲ್ಲಿ ಹೆಚ್ಚು ಕೊಲೆಸ್ಟ್ರಾಲ್​ ಶೇಖರಣೆಯಾದ್ರೆ ಅದು ಹಲವಾರು ಹೃದಯ ರೋಗಗಳಿಗೆ ಕಾರಣವಾಗುತ್ತದೆ. ದಾಳಿಂಬೆ ಹಣ್ಣಿನ ರಸದಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಅಂಶ ಅಪಧಮನಿಗಳಲ್ಲಿ ಶೇಖರಣೆಯಾಗಿರುವ ಕೊಲೆಸ್ಟ್ರಾಲ್​ಅನ್ನ ತೆರವುಗೊಳಿಸುತ್ತದೆ ಮತ್ತು ನಿಮ್ಮ ಹೃದಯವನ್ನ  ಆರೋಗ್ಯಪೂರ್ಣವನ್ನಾಗಿಸುತ್ತದೆ.  ದಿನಕ್ಕೊಂದು ದಾಳಿಂಬೆ ಹಣ್ಣನ್ನ ಸೇವಿಸುವುದರಿಂದ ದೇಹದಲ್ಲಿ ಕೆಟ್ಟ ಕೊಬ್ಬು ಸಂಗ್ರಹಣೆಯಾಗದಂತೆ ತಡೆಯಬಹುದು.

2. ಸಂಧಿವಾತವನ್ನ ಕಡಿಮೆ ಮಾಡುತ್ತದೆ:
ಸಂಧಿವಾತ ತೀವ್ರವಾದ ಜಂಟಿ ಉರಿಯೂತದಿಂದ ಉಂಟಾಗುವ ದೀರ್ಘಕಾಲದ ವೈದ್ಯಕೀಯ ಸ್ಥಿತಿಯಾಗಿದೆ. ದಾಳಿಂಬೆ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುವ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಈ ಹಣ್ಣುಗಳು ಕಾಲಜನ್ ಎಂಬ ಅಂಶವನ್ನ ಹೊಂದಿದ್ದು, ಸಂಧಿವಾತ ಕ್ರಮೇಣವಾಗಿ ಇಳಿಮುಖವಾಗುವಂತೆ ಮಾಡುತ್ತದೆ.  ಸಂಧಿವಾತ ಸಮಸ್ಯೆಯಿಂದ ಬಳಲುತ್ತಿರುವವರು, ದಾಲಿಂಬೆ ಹಣ್ಣನ್ನ ಸೇವಿಸುವುದರಿಂದ ಕ್ರಮೇಣವಾಗಿ ಪರಿಹಾರ ಪಡೆಯಬಹುದು.

3. ಕ್ಯಾನ್ಸರ್ ತಡೆಯುತ್ತದೆ:
ದಾಳಿಂಬೆ ಹಣ್ಣಿನಲ್ಲಿರುವ ಆ್ಯಂಟಿ ಆ್ಯಕ್ಸಿಡೆಂಟ್​ ಅಂಶವು ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ. ದಾಳಿಂಬೆಗಳಲ್ಲಿ ಪ್ಯುನಿಕ್ ಆಸಿಡ್ (ಒಮೆಗಾ -5 ಪಾಲಿ-ಸ್ಯಾಚುರೇಟೆಡ್ ಕೊಬ್ಬಿನಾಮ್ಲ) ಅಂಶವು ಸ್ತನ ಕ್ಯಾನ್ಸರ್​ಗೆ ಕಾರಣವಾಗುವಂತದ ಕೋಶಗಳನ್ನು ಪರಿಣಾಮಕಾರಿಯಾಗಿ ಕೊಲ್ಲುತ್ತದೆ. ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್​ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ದಾಳಿಂಬೆ ಬೀಜಗಳಲ್ಲಿ ಕಂಡುಬರುವ ಸಸ್ಯ ಆಧಾರಿತ ರಾಸಾಯನಿಕಗಳು ಯಾವುದೇ ಕ್ಯಾನ್ಸರ್ ಕೋಶಗಳಿಂದ ದೇಹವನ್ನು ರಕ್ಷಿಸಲು ಸಹಾಯ ಮಾಡುತ್ತದೆ.

4. ಅಧಿಕ ರಕ್ತದೊತ್ತಡವನ್ನ ನಿಯಂತ್ರಿಸುತ್ತದೆ.
ನೀವು ಅಧಿಕ ರಕ್ತದೊತ್ತಡ ಹೊಂದಿದ್ದರೆ ನಿಮ್ಮ ಆಹಾರದಲ್ಲಿ ಹೆಚ್ಚಾಗಿ ದಾಳಿಂಬೆ ಹಣ್ಣುಗಳನ್ನು ಸೇರಿಸಿಕೊಳ್ಳಿ. ಅಧಿಕ ರಕ್ತದೊತ್ತಡವು ಹೃದಯಕ್ಕೆ ತೊಂದರೆಯನ್ನ ಉಂಟುಮಾಡುತ್ತದೆ. ದಾಳಿಂಬೆ ರಸ ಅಥವಾ ದಾಳಿಂಬೆ ಪಲ್ಪ್​ ರಕ್ತದೊತ್ತಡ ನಿರ್ವಹಿಸಲು ನೈಸರ್ಗಿಕ ಮಾರ್ಗವಾಗಿದೆ.

5. ಸೋಂಕುಗಳ ವಿರುದ್ಧ ಹೋರಾಡುತ್ತದೆ.
ನಮ್ಮ ಸುತ್ತಲಿನ ಅನೇಕ ವೈರಸ್ ಸೋಂಕುಗಳು ಮತ್ತು ರೋಗಗಳಿಗೆ ಕಾರಣವಾಗಿವೆ. ದಾಳಿಂಬೆ ಹಣ್ಣಿನಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯಾದ ಗುಣಲಕ್ಷಣಗಳು ರೋಗಾಣುಗಳ ವಿರುದ್ಧ ಹೋರಾಡುತ್ತದೆ. ಅಲ್ಲದೇ ಕ್ಯಾವಿಟಿ ಸಮಸ್ಯೆಗೂ ಪರಿಹಾರ ನೀಡುತ್ತದೆ.

6. ವರ್ಕೌಗೂ ಮುನ್ನ ದಾಳಿಂಬೆ ಸೇವಿಸುವುದು ಉತ್ತಮ 
ನೀವು ಜಿಮ್​ ಹೋಗುವುದಕ್ಕಿಂತ ಮೊದಲು ದಾಳಿಂಬೆ ಹಣ್ಣನ್ನ ಸೇವಿಸಿ. ಯಾಕಂದ್ರೆ ಇದರಲ್ಲಿ ಕಾರ್ಬೋಹೈಡ್ರೇಟ್​ ಹೇರಳವಾಗಿದೆ. ಅದು ನಿಮ್ಮ ವ್ಯಾಯಾಮದ ವೇಳೆ ಹೆಚ್ಚು ಎನರ್ಜಿ ವೇಸ್ಟ್​ ಆಗದಂತೆ ನೋಡಿಕೊಳ್ಳುತ್ತದೆ. ಅಲ್ಲದೆ, ದಾಳಿಂಬೆ ರಸದಲ್ಲಿರುವ ಡಯೇಟರಿ ನೈಟ್ರೇಟ್ ನಿಮ್ಮನ್ನ ಇನಷ್ಟು ಎನರ್ಜಿಟಿಕ್​ ಆಗಿರುವಂತೆ ಮಾಡುತ್ತದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv