ಜಮೀರ್‌ ಒಬ್ಬ ರಾಜಕೀಯ ವಿಧೂಷಕ- ಹೆಚ್‌ಡಿಕೆ ಲೇವಡಿ

ಚನ್ನಪಟ್ಟಣ: ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿರುವ ಜಮೀರ್ ಅಹಮದ್ ಖಾನ್ ಅವರನ್ನು ರಾಜಕೀಯ ವಿಧೂಷಕ ಅಂತಾ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‌.ಡಿ. ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಚನ್ನಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮೀರ್ ಬಗ್ಗೆ ಹೆಚ್ಚು ಚರ್ಚೆ ಬೇಡ ಅಂತ ಹೇಳಿಬಿಟ್ಟರು. ಇನ್ನು ಜೆಡಿಎಸ್‌ನಿಂದ ತಮ್ಮ ಕುಟುಂಬದ ಕೇವಲ ಇಬ್ಬರು ಮಾತ್ರ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ರು. ರಾಜ್ಯದ ಯಾವುದೇ ಭಾಗಕ್ಕೆ ನಾವು ಹೋದ್ರೂ ಜನ ಸೇರ್ತಿದ್ದಾರೆ. ಜಗಳೂರಿನಲ್ಲಿ ಸೇರಿದ ಜನರೇ ಇದಕ್ಕೆ ಸಾಕ್ಷಿ. ಹಾಸನವಷ್ಟೇ ಅಲ್ಲ, ನಾಗಮಂಗಲದಲ್ಲಿಯೂ ಜನ ಸೇರಿದ್ದನ್ನು ನೋಡಿದ್ರೆ ಜೆಡಿಎಸ್​ ಅಧಿಕಾರಕ್ಕೆ ಬರಬೇಕೆಂದು ಜನ ತೀರ್ಮಾನ ಮಾಡಿದ್ದಾರೆ ಎಂಬುದು ಗೊತ್ತಾಗಿದೆ ಅಂತಾನೂ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಹೆಚ್​ಡಿಡಿ ಹುಟ್ಟುಹಬ್ಬದಂದೇ ಪಕ್ಷ ಅಧಿಕಾರಕ್ಕೆ
ಮೇ18ರಂದು ಹೆಚ್​ಡಿಡಿ ಹುಟ್ಟುಹಬ್ಬದಂದು ನನ್ನ ಪಕ್ಷ ಅಧಿಕಾರ ಸ್ವೀಕಾರ ಮಾಡಲಿದೆ. ಇದು ಸತ್ಯ ಕೂಡಾ. ನಾನು ರಾಜಕೀಯ ಮಾಡಲು ಹೋಗಿ ದೇವೇಗೌಡರ ರಾಜಕೀಯವನ್ನ ಬಲಿ ತೆಗೆದುಕೊಂಡ ಆಪಾದನೆ ನನ್ನ ಮೇಲಿದೆ. ಅದನ್ನ ಸರಿಪಡಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದರು.
ಉದ್ಯೋಗ, ಹೊಸ ಕೃಷಿ ನೀತಿ ಬಗ್ಗೆಯೂ ಚಿಂತನೆ ಮಾಡಲಿದ್ದೇನೆ ಎಂದು ಘೋಷಿಸಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಲು ಸಾಧ್ಯವಿಲ್ಲ ಎಂದು ಹೇಳುವ ಸಿದ್ದರಾಮಯ್ಯ ಜ್ಯೋತಿಷ್ಯ ಕಲ್ತಿದ್ದಾರಾ?. ಆ ಕ್ಷೇತ್ರದಲ್ಲಿ ಏನು ಸಾಧನೆ ಮಾಡಿದ್ದಾರೆಂದು ಮೊದಲು ಹೇಳಲಿ ಎಂದು ಸವಾಲು ಹಾಕಿದ್ರು.
ನಾನು ಅಧಿಕಾರದಲ್ಲಿದ್ದಾಗ ಸರ್ಕಾರವನ್ನ ದುರುಪಯೋಗ ಮಾಡಿ ಚುನಾವಣೆ ನಡೆಸಲಿಲ್ಲ. ಜೆಡಿಎಸ್​ ರಾಷ್ಟ್ರೀಯ ಅಧ್ಯಕ್ಷ ಹೆಚ್​.ಡಿ.ದೇವೇಗೌಡರನ್ನು ಕೆಣಕಿದಷ್ಟು ನಮ್ಮ ಪಕ್ಷದ ಬಲಗೊಳ್ಳಲಿದೆ. ಬಿಜೆಪಿ ರಾಘವೇಂದ್ರ, ಕಾಂಗ್ರೆಸ್ ಪಕ್ಷದ ವಿಜಯೇಂದ್ರ ಏನು ಸಾಧನೆ ಮಾಡಿದ್ದಾರೆ ಎಂದು ಪ್ರಶ್ನಿಸಿದ್ರು.

ಸಾಲ ಮನ್ನಾ ಟೋಪಿವಾಲ ಕೆಲಸದಂತೆ
ಸಾಲ ಮನ್ನಾ ಎಂಬುದು ಟೋಪಿವಾಲ ಕೆಲಸದ ರೀತಿ. ರಾಜ್ಯದ ಅಭಿವೃದ್ಧಿ ಮಾಡಲು ಮುಂದಾದಾಗ ಕಾಂಗ್ರೆಸ್ ಸಾಕಷ್ಟು ಅಡ್ಡಗಾಲು ಹಾಕಿದೆ. ಕಳೆದ ಬಾರಿ ಕೂಡಾ ನಾನು ರಾಮನಗರದಲ್ಲಿ ಅರ್ಜಿ ಹಾಕಿ ಬಂದಿದ್ದೆ. ಉಳಿದಂತೆ ಎಲ್ಲವನ್ನ ಕಾರ್ಯಕರ್ತರೇ ಮಾಡಿ ಗೆಲಿಸ್ಸಿದ್ರು. ನಾನು ಗಳಿಸಿರುವುದು ಜನಸಾಮಾನ್ಯರ ಪ್ರೀತಿಯನ್ನ. ಹಾಗಾಗಿ ಈ ಬಾರಿಯೂ ಅರ್ಜಿ ಹಾಕುತ್ತೇನೆ ಅಷ್ಟೇ ಎಂದು ಸ್ಪಷ್ಟಪಡಿಸಿದ್ರು.
ಕಳೆದ 5ದಿನದಿಂದ ಸಿಎಂ ಹಳ್ಳಿ-ಹಳ್ಳಿಗೆ ಹೋಗುವ ಮೂಲಕ ಮೈಸೂರು ಭಾಗದಲ್ಲಿ ಠಿಕಾಣಿ ಹೂಡಿದ್ದಾರೆ. ಇಂದು ಸರ್ಕಾರ ಜನರ ತೆರಿಗೆ ಹಣದಲ್ಲಿ ಜಾಹೀರಾತು ನೀಡಿ ಖರ್ಚು ಮಾಡ್ತಿದೆ. ರಾಜ್ಯದ ಜನರೇ ಕಾಂಗ್ರೆಸ್ ಪಕ್ಷವನ್ನ ಧೂಳಿಪಟ ಮಾಡ್ತೀವಿ ಅಂತ ಕಿರುಚುತ್ತಿದ್ದಾರೆ ಎಂದು ತಿಳಿಸಿದ್ರು.

ಸುದೀಪ್​ರೊಂದಿಗೆ ಅವಿನಾಭಾವ ಸಂಬಂಧ
ಸುದೀಪ್ ಮತ್ತು ನನ್ನದು ಮೊದಲಿನಿಂದಲೂ ಅವಿನಾಭಾವ ಸಂಬಂಧ. ಅವರ ಜೊತೆ ರಾಜಕೀಯದ ಬಗ್ಗೆಯೂ ನಾನು ಮಾತನಾಡಿದ್ದೇನೆ. ಮುಂದಿನ ನಡೆ ಸುದೀಪ್​ಗೆ ಬಿಟ್ಟಿದ್ದು ಎಂದು ಪುನಃ ಸ್ಪಷ್ಟಪಡಿಸಿದರು.
ಸುದೀಪ್​ಗೆ ನನ್ನ ಮೇಲೆ ಸಾಕಷ್ಟು ನಂಬಿಕೆಯಿದೆ. ಪಕ್ಷಕ್ಕೆ ಸೇರುವುದು, ಪಕ್ಷದ ಪ್ರಚಾರಕ್ಕೆ ಮಾತ್ರ ಸೀಮಿತವಾಗುವುದು ಅವರಿಗೆ ಬಿಟ್ಟ ವಿಚಾರ. ದೇವೇಗೌಡರು ಕೂಡಾ ಸುದೀಪ್ ಅವರಿಗೆ ಸಲಹೆ ನೀಡಿದ್ದಾರೆ. ಕರ್ನಾಟಕ ರಾಜ್ಯದ ಜನರ ಸಮಸ್ಯೆ ಸರಿಪಡಿಸಲು ನೀವು ಉತ್ತಮ ನಿರ್ಧಾರ ಕೈಗೊಳ್ಳಿ ಎಂದು ಹೇಳಿದ್ದೇನೆಂದು ಮಾಹಿತಿ ಹಂಚಿಕೊಂಡ್ರು.
ಮಳೆಯಿಂದ ಕಾರ್ಯಕ್ರಮಕ್ಕೆ ಅಡ್ಡಿಯಾಯ್ತು. ಯಾರಿಗಾದ್ರು ತೊಂದರೆಯಾದ್ರೆ ಕ್ಷಮೆಯಿರಲಿ. ಮಳೆಯಲ್ಲಿಯೂ ನೆನಯುವ ಮೂಲಕ ಉತ್ಸಾಹ ತೋರಿದ್ರಿ. ಮನೆ ಮಗ ಬರ್ತಿದ್ದಾನೆ ಎಂಬ ಭಾವನೆ ಕಂಡಿದ್ದೇನೆ. ಹಳ್ಳಿಗಳಿಂದ ಬಂದ ಕಾರ್ಯಕರ್ತರಿಗೂ ತೊಂದರೆಯಾಗಿದೆ. ನಾನಲ್ಲದೇ ಬೇರೆ ಯಾರಾದ್ದಾದ್ರು ಕಾರ್ಯಕ್ರಮವಾಗಿದ್ರೆ ಜನ ಖಾಲಿಯಾಗುತ್ತಿದ್ರು. ನೆನ್ನೆ ಹಾಸನದಲ್ಲಿ ನಡೆದ ಸಮಾವೇಶ ಜೀವಮಾನದಲ್ಲಿಯೇ ಮರೆಯಲಾಗದಂತಹುದು. ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ನನ್ನ ಕಾರ್ಯಕ್ರಮಕ್ಕೆ ಜನ ಬರ್ತಿದ್ದಾರೆ ಎಂದು ಕುಮಾರಸ್ವಾಮಿ ತಮ್ಮ ಅನಿಸಿಕೆ ಹಂಚಿಕೊಂಡ್ರು.

Leave a Reply

Your email address will not be published. Required fields are marked *