ಶ್ರೀಲಂಕಾದಲ್ಲಿ ಜೆಡಿಎಸ್​ ಮುಖಂಡರು ನಾಪತ್ತೆ: ಸಿಎಂ, ಹೆಚ್​ಡಿಡಿ ಟ್ವೀಟ್​

ಬೆಂಗಳೂರು: ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ 7 ಜೆಡಿಎಸ್​ ಮುಖಂಡರು ನಾಪತ್ತೆಯಾಗಿರುವ ಸುದ್ದಿ ತಿಳಿದು ಆಘಾತ ಹಾಗೂ ನೋವಾಗಿದೆ ಎಂದು ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ಕೊಲಂಬೊದಲ್ಲಿ ಪ್ರವಾಸದಲ್ಲಿದ್ದ ರಾಜ್ಯದ JDS ನ ಏಳು ಮಂದಿಯ ತಂಡ ಬಾಂಬ್ ಸ್ಫೋಟದ ನಂತರ ಕಾಣೆಯಾಗಿದ್ದಾರೆ. ಇದನ್ನು ಕೇಳಿ ನನಗೆ ಇನ್ನಿಲ್ಲದ ಆಘಾತ ಹಾಗೂ ನೋವಾಗಿದೆ. ಈ ಪೈಕಿ ಇಬ್ಬರು ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಕಳೆದು ಹೋಗಿರುವವರ ಪತ್ತೆ ಹಚ್ಚಲು ನಾನು ಭಾರತ ರಾಯಭಾರ ಕಚೇರಿಯೊಂದಿಗೆ ಸತತ ಸಂಪರ್ಕದಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

ಹಾಗೇ ಜೆಡಿಎಸ್​​ ವರಿಷ್ಠ ಹೆಚ್​ಡಿ ದೇವೇಗೌಡ ಕೂಡ ಟ್ವೀಟ್​ ಮಾಡಿದ್ದು, ಶ್ರೀಲಂಕಾದಲ್ಲಿ ನಡೆದ ಈ ಹೇಯ ಕೃತ್ಯದಲ್ಲಿ ಗಾಯಗೊಂಡಿರುವವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಹಾಗೂ ಸಂಪರ್ಕಕ್ಕೆ ಸಿಗದೇ ಕಣ್ಮರೆಯಾಗಿರುವ ಕನ್ನಡಿಗರು, ಭಾರತೀಯರು ಶೀಘ್ರವಾಗಿ ಮರಳಿ ಬರುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಶ್ರೀಲಂಕಾದಲ್ಲಿ ಭಯೋತ್ಪಾದಕರು ಬಾಂಬ್ ಸ್ಫೋಟ ನಡೆಸಿ 200 ಕ್ಕೂ ಹೆಚ್ಚು ಅಮಾಯಕರ ಬಲಿ ಪಡೆದ ಹೇಯ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ. ಕನ್ನಡಿಗರಾದ ಹನುಮಂತರಾಯಪ್ಪ ಹಾಗೂ ರಂಗಪ್ಪನವರು ಸೇರಿ ಉಗ್ರರ ಕುಕೃತ್ಯದಲ್ಲಿ ಬಲಿಯಾದವರಿಗೆ ನನ್ನ ದುಃಖತಪ್ತವಾದ ಸಂತಾಪವನ್ನು ಸಲ್ಲಿಸುತ್ತೇನೆ ಎಂದು ಹೆಚ್​ಡಿಡಿ ಬರೆದುಕೊಂಡಿದ್ದಾರೆ.

ನೆಲಮಂಗಲ, ತುಮಕೂರು ಹಾಗೂ ಬೆಂಗಳೂರು ಉತ್ತರ ತಾಲೂಕಿನ ಏಳು ಜನ ಜೆಡಿಎಸ್‌ ಮುಖಂಡರು ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದರು. ಇವರೆಲ್ಲಾ ಈಗ ಸಂಪರ್ಕಕ್ಕೆ ಸಿಗದಿರುವುದು ಆತಂಕಕ್ಕೆ ಕಾರಣವಾಗಿದೆ. ಶಿವಣ್ಣ, ಮುನಿಯಪ್ಪ, ಲಕ್ಷ್ಮೀ ನಾರಾಯಣ, ಹನುಮಂತರಾಯಪ್ಪ, ರಮೇಶ್, ಮಾರೇಗೌಡ ಹಾಗೂ ಪುಟ್ಟರಾಜು ಸಂಪರ್ಕಕ್ಕೆ ಸಿಗದ ಮುಖಂಡರು. ಏ.20ರಂದು ಶ್ರೀಲಂಕಾಗೆ ತೆರಳಿದ್ದ ಇವರು ಶಾಂಗ್ರಿಲಾ‌ ಹೋಟೆಲ್​​ನಲ್ಲಿ ತಂಗಿದ್ದರು. ಆದ್ರೆ ನಿನ್ನೆ ನಡೆದ ಸರಣಿ ಬಾಂಬ್ ಸ್ಫೋಟದ ಬಳಿಕ ಮುಖಂಡರು ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಹಿನ್ನೆಲೆ ಕುಟುಂಬಸ್ಥರು ಆತಂಕಕ್ಕೀಡಾಗಿದ್ದಾರೆ.

ನಾಪತ್ತೆಯಾದವರ ಪೈಕಿ ಹನುಮಂತರಾಯಪ್ಪ ಹಾಗೂ ರಂಗಪಪ್  ಸಾವನ್ನಪ್ಪಿರುವ ಬಗ್ಗೆ ಭಾರತೀಯ ರಾಯಭಾಗರಿ ಕಚೇರಿ ತಿಳಿಸಿದೆ ಎಂದು ಸಿಎಂ ಕೂಡ ಟ್ವೀಟ್​ ಮಾಡಿದ್ದಾರೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv