‘ಈ‌ ದೇಶದ ನಿರುದ್ಯೋಗ ಸಮಸ್ಯೆ ಬಗೆಹರಿಸಲು ಯಾವ ಸಿಎಂ, ಪಿಎಂಗೂ ಆಗಲ್ಲ’

ಹಾಸನ: ಇತ್ತೀಚೆಗೆ ಕೇಂದ್ರದ ಜನಪ್ರಿಯತೆ ಕುಗ್ಗುತ್ತಿದೆ. ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜಾತಿಯವರಿಗೆ ಮೀಸಲಾತಿ ನೀಡಲಾಗುತ್ತಿದೆ. ಇದೇ ಕಾರಣಕ್ಕೆ ಮರು ಮಾತನಾಡದೇ ಎಲ್ಲಾ ಪಕ್ಷಗಳವರೂ ಬೆಂಬಲ ನೀಡಿದ್ದಾರೆ ಎಂದು ಮಾಜಿ ಪ್ರಧಾನಿ, ಹೆಚ್ ಡಿ ದೇವೇಗೌಡ ಹೇಳಿದ್ರು.

ಈ ಕುರಿತು ಹಾಸನದಲ್ಲಿ ಮಾತನಾಡಿದ ಅವರು, ಇದು ಸುಪ್ರೀಂ ಕೋರ್ಟ್​ಗೆ ಹೋಗಿದೆ ಅಲ್ಲಿ ಏನಾಗುತ್ತೋ ನೋಡೋಣ. ನಾವು ಬ್ರಾಹ್ಮಣ ಸಮುದಾಯಕ್ಕೆ ಏನು ಕೊಡಬೇಕೋ ಅದನ್ನು ‌ಕೊಟ್ಟಿದ್ದೇವೆ. ಈ‌ ದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಯಾವ ‌ಪ್ರಧಾನಿ ಅಥವಾ ಸಿಎಂಗೂ ಬಗೆಹರಿಸಲು ಆಗಲ್ಲ ಎಂದು ಹೇಳಿದ್ರು.

ಇದೇ ವೇಳೆ ಲೋಕಸ‌ಭೆ ಚುನಾವಣೆಯಲ್ಲೂ ಕಾಂಗ್ರೆಸ್​ನೊಂದಿಗೆ ಮೈತ್ರಿ ಮುಂದುವರಿಯುತ್ತೆ. ನಮಗೆ ಎಷ್ಟು ಸೀಟು ಕೊಡುತ್ತಾರೋ ಗೊತ್ತಿಲ್ಲ. ಈ ಬಗ್ಗೆ ರಾಹುಲ್ ಗಾಂಧಿ, ವೇಣುಗೋಪಾಲ್, ಸಿದ್ದರಾಮಯ್ಯ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ. ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡೋ ಬಗ್ಗೆ ತೀರ್ಮಾನ ಮಾಡಿಲ್ಲ ಎನ್ನುವ ಮೂಲಕ  ಮತ್ತೆ ಸ್ಪರ್ಧೆ ಕುತೂಹಲ ಕಾಯ್ದಿಟ್ಟಿದ್ದಾರೆ.

ಇನ್ನು ಸಿಬಿಐ ನಿರ್ದೇಶಕರ ವಜಾ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪರಸ್ಪರ ಆಪಾದನೆ ನಂತರ ಪ್ರಕರಣ ಸುಪ್ರೀಂ ಮೆಟ್ಟಿಲೇರಿತ್ತು. ಇದು ಕೇವಲ ತಾಂತ್ರಿಕ ವಿಚಾರ ಅಷ್ಟೇ. ಸಿಬಿಐ ಸೇರಿ ಅನೇಕ ಸ್ವಾಯತ್ತ ಸಂಸ್ಥೆಗಳ ದುರ್ಬಳಕೆ ಹೊಸದಲ್ಲ.ಇತ್ತೀಚಿನ‌ ದಿನಗಳಲ್ಲಿ ಇದು ಹೆಚ್ಚಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ರು.