ದಾವಣಗೆರೆಯಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಬಿ ಮಂಜಪ್ಪರಿಂದ ಬಿರುಸಿನ ಪ್ರಚಾರ

ದಾವಣಗೆರೆ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಬಿಜೆಪಿ ಕಾಂಗ್ರೆಸ್ ಎರಡೂ ಪಕ್ಷಗಳ ಪ್ರಚಾರ ಭರದಿಂದ ಸಾಗಿದೆ. ಇಷ್ಟು ದಿನ ಕಾಂಗ್ರೆಸ್ ಯಾವುದೇ ಬಹಿರಂಗ ಪ್ರಚಾರದಲ್ಲಿ ತೊಡಗಿರಲಿಲ್ಲ. ಈಗ ಮೈತ್ರಿಪಕ್ಷದ ಅಭ್ಯರ್ಥಿ ಎಚ್ ಬಿ ಮಂಜಪ್ಪ ಬಿರುಸಾಗಿ ಪ್ರಚಾರ ನಡೆಸುತ್ತಿದ್ದಾರೆ. ಇಂದು ಮಂಜಪ್ಪ ಜಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ಮಾಡಿದರು. ಜಗಳೂರು ತಾಲೂಕಿನ ಬಿದರಕೆರೆ, ಬಿಸ್ತುವಳ್ಳಿ, ತೋರಣಗಟ್ಟೆ, ಕಲ್ಲದೇವರಪುರ, ದೊಣೆಹಳ್ಳಿ ಮುಸ್ಟೂರು ಮುಂತಾದ ಹಳ್ಳಿಗಳಿಗೆ ತೆರಳಿ ಚುನಾವಣಾ ಪ್ರಚಾರ ಮಾಡಿದರು. ಮನೆಮನೆಗೆ ಭೇಟಿ ಕೊಟ್ಟು ಮತಯಾಚಿಸಿದರು.

ಬಿದರಕೆರೆಯಲ್ಲಿ ಮಾತನಾಡಿದ ಮಂಜಪ್ಪ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಪ್ರಚಾರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಕಡೆ ಹಣ ಇಲ್ಲ. ಕೇವಲ ನಮ್ಮ ಕಡೆ ಮಾತ್ರ ಹಣ ಇದೆ. ಹಣ ಕೊಟ್ಟು ಚುನಾವಣೆ ಗೆಲ್ತೀವಿ ಎಂದು ಬಿಜೆಪಿಯವರು ಹುಮ್ಮಸ್ಸಿನಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು. ಇದಕ್ಕೆ ಮತದಾರರು ತಕ್ಕ ಉತ್ತರ ನೀಡಬೇಕಾಗಿದೆ. ಹಣ ಬಲ ಹೆಚ್ಚೋ ಅಥವಾ ಜನ ಬಲ ಹೆಚ್ಚೋ ಎಂದು ಮತದಾರರು ಏಪ್ರಿಲ್ 23ನೇ ತಾರೀಖು ತೋರಿಸಬೇಕಾಗಿದೆ ಎಂದು ಹೇಳಿದರು.

ಬಿಜೆಪಿಯವರಿಗೆ ಯಾವುದೇ ಸಾಧನೆಗಳಿಲ್ಲ. ಕೇವಲ ಹಣ ಬಲ ಮತ್ತು ಮೋದಿ ಹೆಸರಿನಲ್ಲಿ ಚುನಾವಣೆ ಮಾಡಲು ಹೊರಟಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಜಿಎಂ ಸಿದ್ದೇಶ್ವರ ಅವರಿಗೆ ಟಾಂಗ್ ನೀಡಿದ್ರು. ಕಾಂಗ್ರೆಸ್ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಹಿಂದಿನ ಯುಪಿಎ ಸರ್ಕಾರ ರೈತರ 70,000 ಕೋಟಿ ಸಾಲ ಮನ್ನಾ ಮಾಡಿದೆ. ಆರ್.ಟಿ.ಇ, ಆಹಾರ ಭದ್ರತೆ, ಉದ್ಯೋಗ ಖಾತ್ರಿ ಯೋಜನೆಯಂತಹ ಹಲವಾರು ಯೋಜನೆಗಳನ್ನು ತಂದುಕೊಟ್ಟ ಪಕ್ಷ ಕಾಂಗ್ರೆಸ್ ಎಂದು ಮತದಾರರನ್ನು ಒಲೈಸಲು ಪ್ರಯತ್ನಿಸಿದರು.

ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಭ್ರಷ್ಟಾಚಾರ ಇಲ್ಲದೇ ಹಲವಾರು ಭಾಗ್ಯಗಳನ್ನು ನೀಡಿದ್ದಾರೆ. ಬಡವರು, ರೈತರು, ಕಾರ್ಮಿಕರಿಗೆ ಯೋಜನೆಗಳನ್ನ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಒಳಗೊಂಡಂತೆ ಈಗಿನ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ ರೈತರ ಎಲ್ಲ ಸಾಲಮನ್ನ ಮಾಡುತ್ತಿದೆ ಎಂದು ಹೇಳಿದರು. ಮಂಜಪ್ಪನವರಿಗೆ ಮಾಜಿ ಶಾಸಕ ಎಚ್.ಪಿ ರಾಜೇಶ್, ಕೆಪಿ ಪಾಲಯ್ಯ, ಜೆಡಿಎಸ್ ಮುಖಂಡ ಕೆ.ಬಿ ಕಲ್ಲೇರುದ್ರೇಶ್ ಪ್ರಚಾರಕ್ಕೆ ಸಾಥ್ ನೀಡಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv