ಹಾವೇರಿಯ ಏಲಕ್ಕಿ ಹಾರ ಯಾರ ಕೊರಳಿಗೆ..?

ಏಲಕ್ಕಿ ಕಂಪಿನ ಹಾವೇರಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರ ಈ ಬಾರಿ ಗಮನ ಸೆಳೆದಿದೆ. ಕಾರಣ ಇದು ಸಚಿವ ರುದ್ರಪ್ಪ ಲಮಾಣಿ ಪ್ರತಿನಿಧಿಸುವ ಕ್ಷೇತ್ರ. ಹಾಗೇ ನೋಡಿದರೆ ಹಾವೇರಿ ಜಿಲ್ಲೆ ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಮಾಜಿ ಸಿಎಂ ಯಡಿಯೂರಪ್ಪರ ಕೆಜೆಪಿ ಉದಯವಾಗಿದ್ದೇ ಇಲ್ಲಿ. ಕೆ.ಎಸ್‌.ಈಶ್ವರಪ್ಪರ ರಾಯಣ್ಣ ಬ್ರಿಗೇಡ್‌ ಸೌಂಡ್‌ ಶುರುವಾಗಿದ್ದೇ ಇಲ್ಲಿಂದ. ಬಿಜೆಪಿಯ ಬಂಡಾಯದ ನೆಲ ಹಾವೇರಿ ಅನ್ನೋದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಆದ್ರೆ, ಧಾರವಾಡ ಜಿಲ್ಲೆಯಿಂದ ಹಾವೇರಿ ಹೊರ ಬಂದು ಸ್ವತಂತ್ರ ಜಿಲ್ಲೆಯಾದರೂ ಜನರ ಮನಸ್ಸಿನಲ್ಲಿ ಇನ್ನೂ ಆ ಭಾವನೆ ಮೊಳೆತಿಲ್ಲ. ಕಾರಣವಿಷ್ಟೇ. ಒಂದು ಜಿಲ್ಲೆ ಅನಿಸಿಕೊಳ್ಳಲು ಆಗಬೇಕಿರುವ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಜಿಲ್ಲೆಯಲ್ಲಿ 5 ನದಿಗಳು ಹರಿಯುತ್ತಿದ್ದರೂ ರೈತರು ನೀರಾವರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಮಾಜಿ ಸಚಿವ ಸಿ.ಎಂ.ಉದಾಸಿ, ರುದ್ರಪ್ಪ ಲಮಾಣಿ, ಮನೋಹರ್ ತಹಶೀಲ್ದಾರ್, ಕೆ.ಬಿ.ಕೋಳಿವಾಡ, ಬಿ.ಸಿ.ಪಾಟೀಲ್ ಸೇರಿದಂತೆ ಪ್ರಭಾವಿ ರಾಜಕಾರಣಿಗಳು ಜಿಲ್ಲೆ ಪ್ರತಿನಿಧಿಸಿದರೂ ಸಮಗ್ರ ಪ್ರಗತಿ ಕಂಡಿಲ್ಲ. ಹಾವೇರಿ ಮೀಸಲು ಕ್ಷೇತ್ರದ ಪರಿಸ್ಥಿತಿ ಇದಕ್ಕಿಂತ ಭಿನ್ನಾವಾಗೇನೂ ಇಲ್ಲ. ನಗರದಲ್ಲಿ ಮೂಲ ಸೌಲಭ್ಯಗಳ ಕೊರತೆ, ಉದ್ಯೋಗಕ್ಕಾಗಿ ಅಲೆಯುವ ಯುವಕರು ಕಣ್ಣಿಗೆ ಕಾಣುತ್ತಾರೆ.

ಹಾವೇರಿ ಮೀಸಲು ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 2,16,952. ಕ್ಷೇತ್ರದಲ್ಲಿ ಲಿಂಗಾಯತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸುಮಾರು 65 ಸಾವಿರದಷ್ಟು ಲಿಂಗಾಯತರು, ಕುರುಬರು 28 ಸಾವಿರ, ಮುಸ್ಲಿಂಮರು 29 ಸಾವಿರ, ಎಸ್ಸಿ 25 ಸಾವಿರ, ಎಸ್ಟಿ 16 ಸಾವಿರ ಮತ್ತು ಹಿಂದುಳಿದ ವರ್ಗದವರು 50ಸಾವಿರಕ್ಕೂ ಹೆಚ್ಚಿದ್ದಾರೆ. ಕ್ಷೇತ್ರದ ಇತಿಹಾಸ ಗಮನಿಸಿದರೆ ಜಾತಿ ಧರ್ಮದ ಆಧಾರದ ಮೇಲೆ ಚುನಾವಣೆ ನಡೆದಿಲ್ಲ, ಇದುವರೆಗೂ ವ್ಯಕ್ತಿ ಹಾಗೂ ಪಕ್ಷದ ಸಿದ್ಧಾಂತಗಳನ್ನು ನೋಡಿ ಜನ ಮತ ಚಲಾಯಿಸಿರುವುದು ಈ ಕ್ಷೇತ್ರದ ವಿಶೇಷತೆ.

ಕಣದಲ್ಲಿರುವ ಪ್ರಮುಖರು ಯಾರು?

ಕಳೆದ ವಿಧಾನಸಭಾ ಚುನಾವಣೆಯಲ್ಲಿ 30,208 ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದ ಹಾಲಿ ಶಾಸಕ, ಸಚಿವ ರುದ್ರಪ್ಪ ಲಮಾಣಿ ಈ ಬಾರಿಯೂ ಕಾಂಗ್ರೆಸ್ ಹುರಿಯಾಳು. ಪ್ರಬಲ ವಿರೋಧದ ನಡುವೆಯೂ ನೆಹರು ಓಲೇಕಾರ್‌ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಜೆಡಿಎಸ್‌ನಿಂದ ಡಾ.ಸಂಜಯ್‌ ಡಾಂಗೆ ಕಣದಲ್ಲಿದ್ದಾರೆ.

ಈ ಬಾರಿಯೂ ಮತದಾರರ ಕಣ್ಮಣಿಯಾಗ್ತಾರಾ ಲಮಾಣಿ?

ಪ್ಲಸ್ ಪಾಯಿಂಟ್‌

ರುದ್ರಪ್ಪ ಲಮಾಣಿ ಸಜ್ಜನ, ಸರಳ ಹಾಗೂ ಶಾಂತ ಸ್ವಭಾವದ ರಾಜಕಾರಣಿ. ಜನ ಸಂಪರ್ಕವಿಟ್ಟುಕೊಂಡು ಅಭಿವೃದ್ಧಿ ಕೆಲಸ ಮಾಡುವುದು ರುದ್ರಪ್ಪ ಲಮಾಣಿಯವರ ರಾಜಕಾರಣದ ಸ್ಟೈಲ್‌. ರುದ್ರಪ್ಪ ಲಮಾಣಿ ಕ್ಷೇತ್ರಕ್ಕೆ ಸುಮಾರು 200 ಕೋಟಿಯಷ್ಟು ಅನುದಾನ ತಂದಿದ್ದು, ಅಲ್ಲಲ್ಲಿ ಅಭಿವೃದ್ಧಿ ಕಾರ್ಯಗಳು ಕಾಣಿಸುತ್ತವೆ. ಕ್ಷೇತ್ರದಲ್ಲಿ ನೆಹರು ಓಲೇಕಾರ್‌ ಆಕ್ರಮಣಕಾರಿ ಮನೋಭಾವ ರುದ್ರಪ್ಪ ಲಮಾಣಿಗೆ ವರದಾನವಾಗಿದೆ. ಬಿಜೆಪಿಯಲ್ಲಿನ ಬಂಡಾಯದ ಲಾಭ ಕೂಡಾ ರುದ್ರಪ್ಪ ಅವರಿಗೆ ಸಿಕ್ಕಲಿದೆ. ಇದರ ಜೊತೆಗೆ ಜಿಲ್ಲೆಯ ಬಿಜೆಪಿ ಹಿರಿಯ ರಾಜಕಾರಣಿ ಸಿ.ಎಂ.ಉದಾಸಿ ಅವರೊಂದಿಗೆ ರುದ್ರಪ್ಪ ಲಮಾಣಿ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ. ಸಿ.ಎಂ.ಉದಾಸಿಯವರಿಗೆ ನೆಹರು ಓಲೇಕರ್‌ ಬಗ್ಗೆ ಒಲವು ಇಲ್ಲದೇ ಇರೋದು ರುದ್ರಪ್ಪ ಲಮಾಣಿ ಗೆಲುವಿಗೆ ಸಹಕಾರಿಯಾಗಲಿದೆ.

ಮೈನಸ್ ಪಾಯಿಂಟ್‌:

ಕೇವಲ ಖೋಟಾ ಭರ್ತಿ ಮಾಡಲು ರುದ್ರಪ್ಪ ಲಮಾಣಿಯವರಿಗೆ ಮಜರಾಯಿ ಮತ್ತು ಜವಳಿ ಖಾತೆ ಸಚಿವ ಸ್ಥಾನ ನೀಡಿದರು ಅನ್ನೋ ಆರೋಪವಿದೆ. ಸಿಎಂ ಸಿದ್ಧರಾಮಯ್ಯನವರು ರುದ್ರಪ್ಪರನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಲೇ ಇಲ್ಲ ಅನ್ನೋ ಮಾತುಗಳು ಕ್ಷೇತ್ರದಲ್ಲಿ ಕೇಳಿಬರ್ತಿದೆ. ಸಚಿವ ಸ್ಥಾನದ ಮೇಲೆ ಹಿಡಿತ ಸಾಧಿಸುವ ಮುನ್ನವೇ ಚುನಾವಣೆ ಎದುರಾಗಿದ್ದು, ಪರ್ಫಾಮೆನ್ಸ್‌ಗೆ ಸ್ಕೋಪ್‌ ಸಿಗಲಿಲ್ಲ. ಕ್ಷೇತ್ರದ ಗಂಭೀರ ಸಮಸ್ಯೆಗಳ ನಿವಾರಣೆಗೆ ವಿಶೇಷ ಅನುದಾನ ತರಲು ರುದ್ರಪ್ಪ ವಿಫಲರಾಗಿರುವುದು ಮೈನಸ್ ಪಾಯಿಂಟ್‌. ಜೊತೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಕಾಗದದಲ್ಲೇ ಉಳಿದಿದೆ. ಪ್ರತ್ಯೇಕ ಕೆಸಿಸಿ ಬ್ಯಾಂಕ್ ಸ್ಥಾಪನೆ ಮಾಡಿ ರೈತರಿಗೆ ಸಹಾಯ ಮಾಡ್ತೀನಿ ಎಂಬ ಭರವಸೆ ಭರವಸೆಯಾಗಿಯೇ ಉಳಿದಿದೆ. ಸಚಿವರಾಗಿದ್ದ ವೇಳೆ ಕೇವಲ ಲಂಬಾಣಿ ಸುಮುದಾಯಕ್ಕೆ ಮಾತ್ರ ಆದ್ಯತೆ ನೀಡಿರೋ ಆರೋಪವಿದೆ.

ಕಮಲದ ಅಭ್ಯರ್ಥಿ ನೆಹರು ಓಲೇಕಾರ್‌ ಗೆಲ್ತಾರಾ?

ಪ್ಲಸ್ ಪಾಯಿಂಟ್‌

ನೆಹರು ಓಲೇಕಾರ್ ದಲಿತರು ಮತ್ತು ಹಿಂದುಳಿದ ಜನರಿಗೆ ತುಂಬ ಹತ್ತಿರ ಇರುವ ವ್ಯಕ್ತಿ. ಅಧಿಕಾರ ಇರಲಿ ಇಲ್ಲದೇ ಇರಲಿ ದಲಿತರ ಪರವಾಗಿ ನಿಂತು ಬಡಿದಾಡುವ ಶಕ್ತಿ ಇದೆ. ಹಳ್ಳಿಗಳಲ್ಲಿ ನೆಹರು ಓಲೇಕಾರ್‌ಗೆ ದೊಡ್ಡ ಮಟ್ಟದ ಅಭಿಮಾನಿಗಳ ಪಡೆ ಇದೆ. ಹೆಚ್ಚು ಮತದಾನಕ್ಕೆ ಕಾರಣವಾಗುವ ಯುವ ಸಮುದಾಯ ನೆಹರು ಓಲೇಕಾರ್ ಬೆನ್ನಿಗಿದೆ. ಕಳೆದ ಚುನಾವಣೆಯ ಸೋಲಿನ ಅನುಕಂಪ ಕೈ ಹಿಡಿಯುವ ಸಾಧ್ಯತೆಗಳಿವೆ. ರುದ್ರಪ್ಪ ಲಮಾಣಿ ಕೇವಲ ಲಂಬಾಣಿಗರನ್ನಷ್ಟೇ ಓಲೈಕೆ ಮಾಡಿದ್ರೆ ನೆಹರು ಓಲೇಕಾರ್ ಎಲ್ಲಾ ದಲಿತ ವರ್ಗದ ಜನರ ಪ್ರೀತಿಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೈನಸ್ ಪಾಯಿಂಟ್

ನೆಹರು ಓಲೇಕಾರ್ ಪಾಸಿಟಿವ್ ಪಾಯಿಂಟ್ಸ್‌ಗಿಂತ ನೆಗೆಟಿವ್ ಪಾಯಿಂಟ್ಸ್ ಜಾಸ್ತಿ ಇವೆ. ಬಿಜೆಪಿ ಟಿಕೆಟ್ ವಂಚಿತರ ಬಂಡಾಯ ಶಮನ ಮಾಡುವಲ್ಲಿ ನೆಹರು ಓಲೆಕಾರ್ ವಿಫಲರಾಗಿದ್ದಾರೆ. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಪರಮೇಶ್ವರ ಮೇಲಳಮನಿ, ಟಿಕೆಟ್ ವಂಚಿತರ ಪಟ್ಟಿಯಲ್ಲಿರುವ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಿವರಾಜ್ ಹರಿಜನ, ಬಿಜೆಪಿ ಮುಖಂಡರಾದ ಡಿ.ಎಸ್.ಮಾಳಗಿ, ಮಹಾದೇವಪ್ಪ ನಾಗಮ್ಮನವರ ಹಾಗೂ ಈರಪ್ಪ ಲಮಾಣಿ ಬೆಂಬಲ ಸಿಗದೇ ಇರುವುದು ಓಲೇಕಾರ್‌ಗೆ ನಿದ್ರೆಗೆಡಿಸಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಸಜ್ಜನ ಅವರೇ ನೆಹರು ಓಲೇಕಾರ್‌ಗೆ ಟಿಕೆಟ್ ಕೊಟ್ಟಿದ್ದನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಸಿ.ಎಂ.ಉದಾಸಿಯವರು ರುದ್ರಪ್ಪ ಲಾಮಾಣಿ ಜೊತೆ ಒಳ್ಳೆಯ ಬಾಂಧವ್ಯ ಕಟ್ಟಿಕೊಂಡಿರುವುದರಿಂದ ಲಿಂಗಾಯತ ಮತಗಳು ಅವರತ್ತ ವಾಲುವ ಸಾಧ್ಯತೆ ಹೆಚ್ಚಿದೆ. ಕ್ಷೇತ್ರದಲ್ಲಿ ಲಿಂಗಾಯತ ಮತದಾರರೇ ಹೆಚ್ಚಿರುವುದರಿಂದ ನೆಹರು ಓಲೇಕಾರ್‌ಗೆ ಇದು ತೀವ್ರ ಹಿನ್ನಡೆ. ಜನರ ಜೊತೆ ಸಿಡುಕಿನಿಂದ ಮಾತನಾಡುವುದು, ಸರಿಯಾಗಿ ಸ್ಪಂದಿಸದೇ ಇರುವುದೇ ಓಲೇಕಾರ್‌ಗೆ ಮುಳುವಾಗುವ ಸಾಧ್ಯತೆಯಿತೆ. ಇಷ್ಟೆಲ್ಲಾದರ ನಡುವೆ ಇವರ ಅಧಿಕಾರದ ಅವಧಿಯಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುವುದನ್ನ ಜನ ಮರೆತಿಲ್ಲ.

ಅನಿರೀಕ್ಷಿತ ಗೆಲುವು ಪಡೆಯುತ್ತಾರಾ ಡಾ.ಸಂಜಯ್‌?

ಡಾ.ಸಂಜಯ ಡಾಂಗೆ  ಕ್ಷೇತ್ರ ಮರು ವಿಂಗಡಣೆಯ ನಂತರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆರಂಭಿಸಿದ್ದಾರೆ. ಈ ಬಾರಿ ಡಾ.ಸಂಜಯ ಡಾಂ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ವೈದ್ಯರಾಗಿ ಜನರಿಗೆ ಹತ್ತಿರವಾದವರು ಎಂಬುದನ್ನ ಹೊರತು ಪಡಿಸಿದರೇ ಗೆಲ್ಲಲು ಇವರ ಬಳಿ ದೊಡ್ಡ ಅಸ್ತ್ರಗಳಿಲ್ಲ. ಹೀಗಾಗಿ ಇಲ್ಲಿ ಕಾಂಗ್ರೆಸ್ ವರ್ಸಸ್‌ ಬಿಜೆಪಿ ನಡುವೆಯೇ ರಿಯಲ್ ಫೈಟ್‌.

ವರದಿ: ಪ್ರಕಾಶ ನೂಲ್ವಿ

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv