ಮಂಡ್ಯ ಅತೃಪ್ತರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಜೊತೆ ದೇವೇಗೌಡ ಪ್ರಚಾರ

ಮಂಡ್ಯದಲ್ಲಿ ಮೊಮ್ಮಗ ನಿಖಿಲ್​​ರ​ನ್ನ ಗೆಲ್ಲಿಸಿಕೊಳ್ಳಲು ಜೆಡಿಎಸ್​ ವರಿಷ್ಠ ಹೆಚ್.ಡಿ ದೇವೇಗೌಡ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ನಿಖಿಲ್‌ ಪರ ಪ್ರಚಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕೈ ನಾಯಕರ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವ ಮೂಲಕ, ಒಂದೇ ಏಟಿಗೆ ಎರಡು ಹಕ್ಕಿ‌ ಹೊಡೆಯಲು ದೇವೇಗೌಡ ಮುಂದಾಗಿದ್ದಾರೆ. ನಾಳೆ ಮಾಜಿ ಶಾಸಕ ಚೆಲುವರಾಯಸ್ವಾಮಿಯ ಕ್ಷೇತ್ರವಾದ ನಾಗಮಂಗಲ ಹಾಗೂ ನರೇಂದ್ರ ಸ್ವಾಮಿ ಕ್ಷೇತ್ರವಾದ ಮಳವಳ್ಳಿಯಲ್ಲಿ ದೇವೇಗೌಡ ಬಿರುಸಿನ ಪ್ರಚಾರ ನಡೆಸಲಿದ್ದಾರೆ. ದೇವೇಗೌಡರಿಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸಾಥ್​ ನೀಡಲಿದ್ದಾರೆ. ಈ ‌ಮೂಲಕ‌ ಕೈ ಅತೃಪ್ತರ ಕ್ಷೇತ್ರಗಳಲ್ಲೇ ಸ್ಪಷ್ಟ ಸಂದೇಶ ರವಾನಿಸಲು ದೇವೇಗೌಡ ಮುಂದಾಗಿದ್ದಾರೆ. ಈ ಎರಡು ಕ್ಷೇತ್ರಗಳಲ್ಲೇ‌ ನಿಖಿಲ್​ಗೆ ಹೆಚ್ಚು ಹೊಡೆತ ಬೀಳಲಿದೆ ಎಂಬ ಆತಂಕವಿತ್ತು. ಹಾಗಾಗಿಯೇ ಇದೇ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲು ದೇವೇಗೌಡ ನಿಗದಿ ಮಾಡಿದ್ದಾರೆ.