ವೈದ್ಯ ಲೋಕದಲ್ಲೊಂದು ಅಚ್ಚರಿ..! 32 ಕಿ.ಮೀ ದೂರದಿಂದಲೇ ಆಪರೇಷನ್ ಮಾಡಿದ ವೈದ್ಯ!

ಗಾಂಧಿನಗರ: ವೈದ್ಯರೊಬ್ಬರು ನಿನ್ನೆ  32 ಕಿ.ಮೀ ದೂರದಲ್ಲಿ ಕುಳಿತುಕೊಂಡೇ ರೋಗಿಗೆ ಆಂಜಿಯೋಪ್ಲಾಸ್ಟಿ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಹಿರಿಯ ಕಾರ್ಡಿಯಾಲಾಜಿಸ್ಟ್​​ ಡಾ.ತೇಜಸ್​ ಪಟೇಲ್ ಗುಜರಾತ್​​ನ ಗಾಂಧಿನಗರದ ಆಕರ್ಷಧಾಮ್​​​ ಸ್ವಾಮಿನಾರಾಯಣ ಟೆಂಪಲ್​ನ ಲ್ಯಾಬ್​​ನಿಂದಲೇ ​​​ 32 ಕಿ.ಮೀ ದೂರದ ಆಸ್ಪತ್ರೆಯಲ್ಲಿದ್ದ ಮಹಿಳೆಗೆ ಆಂಜಿಯೋಪ್ಲಾಸ್ಟಿ ಮಾಡಿದ್ದಾರೆ.  ವಿಶ್ವದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಇನ್​-ಹ್ಯೂಮನ್​ ಟೆಲಿರೋಬೋಟಿಕ್​ ಕೊರೋನರಿ ಇಂಟರ್​ವೆನ್ಷನ್​​​ ಮೂಲಕ ಡಾ. ಪಟೇಲ್ ಈ ಸರ್ಜರಿಯನ್ನು ಯಶಸ್ವಿಯಾಗಿ ಮಾಡಿದ್ದಾರೆ. ​​

ಆಪರೇಷನ್​ ಥಿಯೇಟರ್​​ನ ಕ್ಯಾತ್​ ಲ್ಯಾಬ್​ನಲ್ಲಿ ಇಂಟರ್ನೆಟ್​​ ಚಾಲಿತ ರೋಬೋಟಿಕ್​​ ಕೈಗಳ ಸಹಾಯದಿಂದ ಈ ಪ್ರಕ್ರಿಯೆಯನ್ನು ನಡೆಸಲಾಯಿತು. ಡಾ. ಪಟೇಲ್​ ಅವರು ದೂರದಲ್ಲಿ ಕುಳಿತುಕೊಂಡೇ ರೋಬೋಟಿಕ್​​ ಕೈಗಳನ್ನ ಅಪರೇಟ್​ ಮಾಡೋ ಮೂಲಕ ಮಹಿಳೆಗೆ ಆಂಜಿಯೋಪ್ಲಾಸ್ಟಿ ಮಾಡಿದ್ರು. ಒಂದು ವೇಳೆ ಏನಾದ್ರೂ ಸಮಸ್ಯೆ ಎದುರಾದಲ್ಲಿ ಅದನ್ನು ನಿಭಾಯಿಸಲೆಂದು ಆಪರೇಷನ್​ ಥಿಯೇಟರ್​​ನಲ್ಲಿ ವೈದ್ಯರ ತಂಡ ಮಹಿಳೆಯ ಜೊತೆ ಇತ್ತು. ಇತ್ತೀಚೆಗೆ ಹೃದಯಾಘಾತಕ್ಕೊಳಗಾಗಿದ್ದ ಮಹಿಳೆಗೆ ಕೆಲವು ದಿನಗಳ ಹಿಂದೆ ಆಂಜಿಯೋಪ್ಲಾಸ್ಟಿ ಮೂಲಕ ಆರ್ಟರಿಯಲ್ಲಿದ್ದ ಬ್ಲಾಕೇಜ್​ ಹೊರತೆಗೆಯಲಾಗಿತ್ತು. ನಿನ್ನೆ ಮತ್ತೊಂದು ಬ್ಲಡ್​ ವೆಸಲ್​ನಲ್ಲಿದ್ದ ಬ್ಲಾಕೇಜ್​ ಹೊರತೆಗೆಯಲು ರೋಬೋಟಿಕ್​​​ ಪ್ರಕ್ರಿಯೆಯನ್ನ ಬಳಸಿಕೊಳ್ಳಲಾಯ್ತು.

ಟೆಲಿ ರೊಬೋಟಿಕ್ಸ್​ ಎಂದರೆ ಟೆಲಿ ಮೆಡಿಸಿನ್ ಹಾಗೂ ರೋಬೋಟಿಕ್ಸ್​ನ ಮಿಶ್ರಣ. ಇಂದು ರೋಗಿಗೆ 32 ಕಿ.ಮೀ ದೂರದಿಂದ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಮುಂದೆ ರಾಜ್ಯದ, ದೇಶದ ಅಥವಾ ಜಗತ್ತಿನ ಯಾವುದೇ ಮೂಲೆಯಲ್ಲಿರೋ ರೋಗಿಗೆ ಇದೇ ರೀತಿ ಆಪರೇಷನ್​ ಮಾಡಬಹುದು ಎಂದು ಡಾ. ಪಟೇಲ್ ಹೇಳಿದ್ದಾರೆ. ಕ್ಯಾತ್​​ ಲ್ಯಾಬ್, ರೋಬೋಟಿಕ್ ಆರ್ಮ್​​ ಹಾಗೂ ಇಂಟರ್ನೆಟ್​​ ಸೌಲಭ್ಯ ಇದ್ದರೆ ಸಾಕು ವೈದ್ಯರು ಎಲ್ಲೇ ಇದ್ದರೂ ರೋಗಿಗೆ ಚಿಕಿತ್ಸೆ ನೀಡಬಹುದು ಎಂದು ಅವರು ತಿಳಿಸಿದ್ದಾರೆ.

ಇನ್ನು, ಶಸ್ತ್ರಚಿಕಿತ್ಸೆಗೆ ಈ ತಂತ್ರಜ್ಞಾನವನ್ನು ಒದಗಿಸಿದ ಅಮೆರಿಕಾ ಮೂಲದ ಕಾರಿಂಡಸ್​ ಸಂಸ್ಥೆಯ ಸಿಇಓ ಈ ಬಗ್ಗೆ ಮಾತನಾಡಿ, 2001ರಲ್ಲಿ ಮೊದಲ ಟೆಲಿರೋಬೋಟಿಕ್​ ಸರ್ಜರಿ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ. ಅಟ್ಲಾಂಟಿಕ್​​ನಲ್ಲಿ ಈ ಪ್ರಕ್ರಿಯೆ ಬಳಸಿ ಲ್ಯಾಪ್ರೋಸ್ಕೋಪಿಕ್​ ಗಾಲ್​ ಬ್ಲಾಡರ್​ ಸರ್ಜರಿಯನ್ನ ಮಾಡಲಾಗಿತ್ತು ಎಂದು ಅವರು ಹೇಳಿದ್ದಾರೆ.

ಪಟೇಲ್​ ಅವರು ಈವರೆಗೆ 300 ರೋಬೋಟಿಕ್ ಸರ್ಜರಿಗಳನ್ನ ಮಾಡಿದ್ದಾರೆ. ಆದರೆ ಈ  ಬಾರಿ ಸಂಪೂರ್ಣ ಲೈವ್​​ ಆಪರೇಷನ್​​​ ಮಾಡಲು ನಿರ್ಧರಿಸಿದ್ದರು. ಇದಕ್ಕಾಗಿ ಅವರು 2 ವರ್ಷಗಳಿಂದ ತಯಾರಾಗಿದ್ದರು. ಯಾವುದೇ ತಂತ್ರಜ್ಞಾನವಾದರೂ ಮೊದಲಿಗೆ ಕಾನ್ಸೆಪ್ಟ್​​ ರೂಪದಲ್ಲಿ ಬರುತ್ತದೆ. ಅದನ್ನ ಪ್ರಾಣಿಗಳು ಅಥವಾ ಡಮ್ಮಿಗಳ ಮೇಲೆ ಪ್ರಯೋಗ ಮಾಡಲಾಗುತ್ತದೆ. ಈ ಹಂತಗಳನ್ನ ಯಶಸ್ವಿಯಾಗಿ ಮುಗಿಸಿದ ನಂತರ ನಮಗೆ ಇನ್​​​​-ಹ್ಯೂಮನ್​ ಟೆಲಿ-ರೋಬೋಟಿಕ್ಸ್​ ಪ್ರಕ್ರಿಯೆ ನಡೆಸಲು ಧೈರ್ಯ ಬಂತು ಎಂದು ಪಟೇಲ್​ ಹೇಳಿದ್ದಾರೆ.