ಮೀಸಲಾತಿಗಾಗಿ ಮತ್ತೆ ಬೀದಿಗಿಳಿದ ಗುಜ್ಜಾರ್ ಸಮುದಾಯ

ಜೈಪುರ: ಶೇಕಡಾ 5 ರಷ್ಟು ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ರಾಜಸ್ಥಾನದಲ್ಲಿ ಗುಜ್ಜಾರ್ ಸಮುದಾಯದವರು ಮತ್ತೆ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಸವಾಯಿ ಮಧೋಪುರ್​ ಜಿಲ್ಲೆಯಲ್ಲಿ ರೈಲು ಹಳಿಗಳ ಮೇಲೆ ಕೂತು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ರೈಲು ತಡೆದು ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದ್ರು. ಇನ್ನು ಪ್ರತಿಭಟನೆ ವೇಳೆ ರೈಲು ಹಳಿ ಮೇಲೆ ಕುಳಿತು ಧರಣಿ ನಡೆಸಿದ್ರಿಂದ ಸುಮಾರು 10ಕ್ಕೂ ಅಧಿಕ ರೈಲುಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಪ್ರತಿಭಟನೆಯ ಕಾವು ಕಡಿಮೆ ಆದ ನಂತರ ರೈಲುಗಳ ಸಂಚಾರ ಶುರುವಾಯ್ತು. ಈ ವೇಳೆ ಮಾತನಾಡಿದ ಗುಜ್ಜಾರ್ ಸಮುದಾಯದ ನಾಯಕ ಕಿರೋರಿ ಸಿಂಗ್ ಬೈನ್ಸಾಲಾ, ನಮಗೆ ಶೇಕಡಾ 5 ರಷ್ಟು ಮೀಸಲಾತಿ ನೀಡಬೇಕು. ನನ್ನ ಈ ಬೇಡಿಕೆಗೆ ಸರ್ಕಾರ ಮನ್ನಣೆ ನೀಡಲಿಲ್ಲ. ಹಾಗಾಗಿ ನಾವು ಇದೀಗ ಪ್ರತಿಭಟನೆ ಆರಂಭಿಸಿದ್ದೇನೆ. ಸರ್ಕಾರ ಏನು ಮಾಡುತ್ತೋ ಗೊತ್ತಿಲ್ಲ ಆದ್ರೆ ನಮಗೆ ಶೇಕಡಾ 5 ರಷ್ಟು ಮೀಸಲಾತಿ ನೀಡಬೇಕು ಅಂತಾ ಸರ್ಕಾರವನ್ನು ಒತ್ತಾಯಿಸಿದ್ದಾರೆ.