ಡ್ಯಾನ್ಸ್ ಮಾಡ್ತಾ ಸಾಗ್ತಿದ್ದ ದಿಬ್ಬಣದ ಜೊತೆ ಮದುಮಗನೂ ಡ್ರೈನೇಜ್​ಗೆ ಬಿದ್ದ ..!

ನವದೆಹಲಿ: ಮದುವೆ ಅಂದ್ರೆ ಸಾಕು, ಮನೆಯಲೆಲ್ಲಾ ಸಂಭ್ರಮ, ಉತ್ಸಾಹ. ಇನ್ನು, ಮದುವೆಯ ಹಿಂದಿನ ದಿನವಂತೂ ಹಾಡು, ಕುಣಿತ ಅಂತ ಭಾರೀ ಮೋಜು ಮಸ್ತಿ ಇರುತ್ತೆ. ಜೊತೆಗೆ ಮದುವೆಗೆ ಹೋಗುವಾಗ ಬಾರಾತ್ ಅಂದ್ರೆ ಮದುಮಗನ ದಿಬ್ಬಣದ ಜೊತೆಯಲ್ಲೂ ಭರ್ಜರಿ ಸ್ಟೆಪ್ಸ್ ಹಾಕ್ತಾ, ಡಿಜೆ ಜೊತೆಗೆ ಹೋಗುವುದು ಕೂಡ ಕಾಮನ್. ಆದ್ರೆ, ಹೀಗೆ ಬಾರಾತ್ ಜೊತೆ ಡ್ಯಾನ್ಸ್ ಮಾಡ್ತಾ ಹೋಗುವಾಗ ನೆಲ ಗಟ್ಟಿ ಇದೆಯಾ ಅನ್ನೋದನ್ನ ಮೊದಲೇ ಖಾತ್ರಿ ಪಡಿಸಿಕೊಂಡ್ರೆ ನಿಮ್ಮ ಮೈಕೈಗೇ ಒಳ್ಳೇದು. ಅದ್ರಲ್ಲೂ ಮದುವೆ ಗಂಡು ಹುಷಾರಾಗಿರಬೇಕು. ಯಾಕಂದ್ರೆ ಮದುವೆ ದಿಬ್ಬಣದ ಜೊತೆ ಡ್ಯಾನ್ಸ್​ ಮಾಡ್ತಾ ಸಾಗುತ್ತಿದ್ದಾಗ ಮದುಮಗ ಚರಂಡಿಗೆ ಬಿದ್ದ ಘಟನೆ ದೆಹಲಿಯ ಸೆಕ್ಟರ್ 52ರಲ್ಲಿ ನಡೆದಿದೆ.

ಹೋಶಿಯಾರ್​ಪುರ್​ನಲ್ಲಿ ವಿವಾಹ ಮಹೋತ್ಸವವೊಂದು ನಡೀತಿತ್ತು. ಇದಕ್ಕಾಗಿ ಗಂಡಿನ ಕಡೆಯವರು ಮದುವೆಯ ದಿಬ್ಬಣ ಹೊರಟಿದ್ರು. ಯಥಾ ಪ್ರಕಾರ ಹಾಡು, ಡಿಜೆ, ಡ್ಯಾನ್ಸ್ ಎಲ್ಲಾ ಇತ್ತು. ಆದ್ರೆ, ಡ್ರೈನೇಜ್​ಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಮೇಲೆ ದಿಬ್ಬಣ ಬಂದಾಗ, ಯಡವಟ್ಟಾಗಿದೆ. ಇದ್ದಕ್ಕಿದ್ದಂತೆ ಸೇತುವೆ ಕುಸಿದುಬಿದ್ದ ಪರಿಣಾಮ, ಮದುಮಗನೂ ಸೇರಿದಂತೆ 15 ಮಂದಿ ಡ್ರೈನೇಜ್​ಗೆ ಬಿದ್ದಿದ್ದಾರೆ. ಶನಿವಾರ ರಾತ್ರಿ ಸುಮಾರು 9.30ರ ವೇಳೆಗೆ ಈ ಘಟನೆ ನಡೆದಿದ್ದು, ಇಬ್ಬರು ಮಕ್ಕಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಸುಮಾರು 10 ನಿಮಿಷಕ್ಕೂ ಹೆಚ್ಚು ಕಾಲ ದಿಬ್ಬಣದ ಜೊತೆಗಿದ್ದವರು ಆ ಸೇತುವೆ ಮೇಲೆಯೇ ಕುಣಿಯುತ್ತಿದ್ದರು. ಭಾರ ತಡೆಯಲಾಗದೆ ಸೇತುವೆ ಕುಸಿದಿರಬಹುದು ಅಂತ ಸ್ಥಳೀಯರು ಹೇಳಿದ್ದಾರೆ. ಗಾಯಾಳುಗಳನ್ನೆಲ್ಲಾ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಆದ್ರೆ, ಸ್ವಲ್ಪ ಯಾಮಾರಿದ್ರೂ ಮದುವೆಯ ಸಂಭ್ರಮವನ್ನ ದುಃಖದ ಕರಿ ನೆರಳು ಆವರಿಸಿಕೊಂಡು ಬಿಡುತ್ತಿತ್ತು.