ಪರಶುರಾಮನ ಬಗ್ಗೆ ಗೃಹ ಸಚಿವರೇ ಹೇಳ್ಬೇಕು, ನಾನಲ್ಲ ಎಂದ ಶಿವಾನಂದ ಪಾಟೀಲ

ಹುಬ್ಬಳ್ಳಿ: ಗೌರಿ ಲಂಕೇಶ್​ ಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಪರಶುರಾಮ ವಾಗ್ಮೊರೆ ಸಿಂದಗಿ ನಿವಾಸಿ. ನನಗೆ ಇವನ ಬಗ್ಗೆ ಹೆಚ್ಚಾಗಿ ಏನು ತಿಳಿದಿಲ್ಲ. ಹಾಗಾಗಿ ಈ ಬಗ್ಗೆ ಏನೇ ಹೇಳಬೇಕಿದ್ದರೂ ಗೃಹ ಸಚಿವರು ಹೇಳಬೇಕು ಅಂತ ಆರೋಗ್ಯ ಮತ್ತು ಕುಟುಂಬ ಇಲಾಖೆ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಅವ್ರು, ನನಗಿನ್ನೂ ವಿಜಯಪುರ ಜಿಲ್ಲಾ ಉಸ್ತುವಾರಿ ಸ್ಥಾನ ಕೊಟ್ಟಿಲ್ಲ. ಪರಶುರಾಮ ಬಂಧನ ಹಿನ್ನೆಲೆಯಲ್ಲಿ ನಾನು ಹೇಗೆ ಅಧಿಕಾರಿಗಳ ಸಭೆ ನಡೆಸಲಿ? ವಿಜಯಪುರ ಉಸ್ತುವಾರಿ ನೀಡಿದ ಮೇಲೆ ಸಭೆ ನಡೆಸಬಹುದು. ಹಿಂದಿನ ಸಿದ್ದರಾಮಯ್ಯ ಸರ್ಕಾರ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿತ್ತು. ಆದರೂ ಸಮ್ಮಿಶ್ರ ಸರ್ಕಾರ ಹಂತಕನನ್ನ ಬಂಧಿಸಿ ಒಳ್ಳೆಯ ಕೆಲಸ ಮಾಡಿದೆ ಎಂದು ಹೇಳಿದ್ರು.

ಎಲ್ಲರಿಗೂ ಸಚಿವ ಸ್ಥಾನ ಪಡೆಯಬೇಕೆಂಬ ಆಸೆ ಇರೋದು ಸಹಜ. ರಾಜಕೀಯದಲ್ಲಿ ಕೆಲವು ಬಾರಿ ಜಾತಿ ಮತ್ತು ಪ್ರದೇಶದ ಆಧಾರದಲ್ಲಿ ಸಚಿವ ಸ್ಥಾನ ಹಂಚಿಕೆ ಮಾಡುತ್ತಾರೆ. ಎಂ.ಬಿ.ಪಾಟೀಲ್ ಎಲ್ಲಿಯೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಬದಲಾಗಿ ಪಕ್ಷ ಬಿಟ್ಟು ಯಾವುದೇ ಕೆಲಸ ಮಾಡುವುದಿಲ್ಲ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ನನ್ನ ಖಾತೆಯಲ್ಲಿ ಕೆ.ಆರ್​. ರಮೇಶ್ ಕುಮಾರ್​ ಅವರು ನಿರ್ವಹಿಸಿದ್ದು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಅವರಿಗಿಂತ ಹೆಚ್ಚು ಏನೂ ಮಾಡಲು ಆಗದೇ ಇದ್ದರೂ ಅವರಷ್ಟಾದರೂ ಕೆಲಸ ಮಾಡುತ್ತೇನೆ ಎಂದು ಶಿವರಾಜ್ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv