‘ಇಂಜಿನೀರ್​​ ಗೌಡಯ್ಯ, ಸ್ವಾಮಿ ಪ್ರಕರಣ ಚಾರ್ಜ್‌ಶೀಟ್‌ನಲ್ಲೇ ಮುಚ್ಚಿಹೋಗುತ್ತೆ’

ಹುಬ್ಬಳ್ಳಿ: ಇತ್ತೀಚೆಗೆ ಎಸಿಬಿಯಿಂದ ದಾಳಿಗೊಳಗಾಗಿರುವ ಬಿಡಿಎ ಇಂಜಿನೀಯರ್​ ಗೌಡಯ್ಯ ಹಾಗೂ ಕೆಐಎಡಿಬಿ ಚೀಫ್​ ಇಂಜಿನೀಯರ್​ ಸ್ವಾಮಿಯವರ ಮೇಲಿರುವ ಪ್ರಕರಣಗಳನ್ನು ರಾಜ್ಯ ಸರ್ಕಾರವೇ ಮುಚ್ಚಿ ಹಾಕಲಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್​ ಆರೋಪಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಸಿಬಿ ದಾಳಿಯಿಂದ ಬಯಲಾಗಿರುವ ಭ್ರಷ್ಟಾಚಾರಿಗಳ ಅಕ್ರಮ ಚಾರ್ಜ್‌ಶೀಟ್‌ನಲ್ಲಿ ಮುಚ್ಚಿಹೋಗಲಿದೆ. ಕಾದು ನೋಡಿ ಎಂದರು.
ರಾಜ್ಯದಲ್ಲಿರುವ ಅಧಿಕಾರಿಗಳು, ಮಂತ್ರಿಗಳು ಎಷ್ಟು ಸಾಧ್ಯವೋ ಅಷ್ಟು ಲಂಚದ ಹಣ ಬಳಿದುಕೊಳ್ಳುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಹೀಗಾಗಿ ಸರ್ಕಾರದಲ್ಲಿ ಭ್ರಷ್ಟಾಚಾರ ಟೂ ಮಚ್​ ಆಗಿದೆ. ವಿಜಯಪುರ ,ಬಾಗಲಕೋಟೆ ತಹಶೀಲ್ದಾರ್​​ ಕಚೇರಿಗಳಲ್ಲಿ ಲಂಚವಿಲ್ಲದೇ,ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ಶೆಟ್ಟರ್​ ಹರಿಹಾಯ್ದರು.
ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಇದ್ದ ಭ್ರಷ್ಟಾಚಾರ, ಮೈತ್ರಿ ಸರ್ಕಾರ ಬಂದ ಮೇಲೂ ಮುಂದುವರಿದಿದೆ. ಸಚಿವ ರೇವಣ್ಣ ತಮ್ಮ ಲೋಕಪಯೋಗಿ ಇಲಾಖೆಯಲ್ಲಿ 700-800 ಜನರ ವರ್ಗಾವಣೆ ಮಾಡಿದ್ದರು. ಈ ಬಗ್ಗೆ ಮಾಧ್ಯಮಗಳು ದಾಖಲೆ ಸಮೇತ ಕೇಳಿದಾಗ ಇಲ್ಲಾ ಬರೀ 610 ಜನರ ವರ್ಗಾವಣೆ ಮಾಡಿದ್ದಾಗಿ ಹೇಳುತ್ತಿದ್ದಾರೆ. ಅಷ್ಟೇ ಅಲ್ಲ, ಸಚಿವ ರೇವಣ್ಣ ಅಕ್ಕ ಪಕ್ಕದ ಇಲಾಖೆಗಳಲ್ಲೂ ಕೈ ಹಾಕುತ್ತಿದ್ದಾರೆ. ಅವರಿಗೆ ಮೊದಲಿನಿಂದಲೂ ಕೈ ಹಾಕುವ ಸ್ವಭಾವ ಇದೆ. ಇದೇ ಕಾರಣಕ್ಕೆ ವಿವಿಧ ಇಲಾಖೆಗಳ ಸಚಿವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಅಸಮಾಧಾನವೇ ಭುಗಿಲೆದ್ದು ಸರ್ಕಾರ ಪತನವಾಗಲಿದೆ ಎಂದು ಜಗದೀಶ್​ ಶೆಟ್ಟರ್​ ಭವಿಷ್ಯ ನುಡಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv