ಸರ್ಕಾರ ವಿದ್ಯಾರ್ಥಿಗಳ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡ್ತಿದೆ- ಬಿ.ವೈ.ವಿಜಯೇಂದ್ರ

ತುಮಕೂರು: ಉಚಿತ ಬಸ್​ಪಾಸ್ ನೀಡುವಂತೆ ಆಗ್ರಹಿಸಿ ಹೋರಾಟ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಿನ್ನೆ (ಶನಿವಾರ) ಪೊಲೀಸರಿಂದ ಲಾಠಿ ಚಾರ್ಜ್ ಮಾಡಿಸಲಾಗಿತ್ತು. ಪೊಲೀಸರ ಮೂಲಕ ಸರ್ಕಾರ ವಿದ್ಯಾರ್ಥಿಗಳ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿದೆ ಎಂದು ಬಿಜೆಪಿ ಯುವ‌ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಕಿಡಿಕಾರಿದ್ದಾರೆ.
ತುಮಕೂರಿನಲ್ಲಿ ಈ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ಜನರ ವಿಶ್ವಾಸ ಇಲ್ಲದೇ ಅಸ್ತಿತ್ವಕ್ಕೆ ಬಂದ ಸರ್ಕಾರದಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ. ಇಂತಹ ಹೋರಾಟಗಳನ್ನು ಹತ್ತಿಕ್ಕುವುದೇ ಸರ್ಕಾರದ ಕೆಲಸವಾಗಿದೆ ಎಂದು ಹರಿಹಾಯ್ದಿದ್ದಾರೆ.
ಲೋಕಸಭಾ ಚುನಾವಣೆಗೆ ಸ್ಪರ್ಧೆ
ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ವಿಷಯವಾಗಿ ಮಾತನಾಡಿರುವ ವಿಜಯೇಂದ್ರ, ಪಕ್ಷ ತಗೆದುಕೊಳ್ಳುವ ತೀರ್ಮಾನ ನಾನು ಬದ್ದನಾಗಿರುತ್ತೇನೆ. ಸದ್ಯ ಯುವ‌ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಪಕ್ಷ ಸಂಘಟನೆಯತ್ತ ನಾನು ಗಮನಹರಿಸುತ್ತೇನೆ ಎಂದು ತಿಳಿಸಿದ್ದಾರೆ.
ಸಮ್ಮಿಶ್ರ ಸರ್ಕಾರದ ಸ್ಥಿರತೆ‌ವಿಚಾರ

ರಾಜ್ಯ ರಾಜಕಾರಣದಲ್ಲಿ ಬೂಟಾಟಿಕೆ ಮಾಡಿದವರು ಈಗ ಮುಖ್ಯಮಂತ್ರಿಯಾಗಿದ್ದಾರೆ. ಅಧಿಕಾರಕ್ಕೆ ಬರುವ ಮುಂಚೆ ರಾಜ್ಯ ಪ್ರವಾಸ ಮಾಡುತ್ತೇನೆ, ಜನರ ಸಂಕಷ್ಟ ಆಲಿಸುತ್ತೇನೆ ಅಂತಾ ಮೂರ್ನಾಲ್ಕು ಜಿಲ್ಲೆ ಸುತ್ತಿ ಬೂಟಾಟಿಕೆ ಮಾಡಿದ್ದರು. ಸಿಎಂ ಆದ ಮೇಲೆ ಕೊಟ್ಟ ಭರವಸೆಯನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಹೆಚ್.ಕೆ.ಪಾಟೀಲ್ ಅಂತಹ ಹಿರಿಯ ಕಾಂಗ್ರೆಸ್ಸಿಗರು ಪತ್ರ ಬರೆದು ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಇದರಿಂದಲೇ ಗೊತ್ತಾಗುತ್ತದೆ ಈ ಸರ್ಕಾರ ಅತೀ ಶೀಘ್ರದಲ್ಲೇ ಬೀಳತ್ತೆ ಅಂತ ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv