ಗೋನಾಳು ಘಟನೆ ಖಂಡಿಸಿ ಬೆಂಗಳೂರು ಚಲೋ

ಬಳ್ಳಾರಿ: ಗೋನಾಳು ಘಟನೆಯನ್ನು ಖಂಡಿಸಿ ಜಿಲ್ಲಾ ದಲಿತಪರ ಸಂಘಟನೆಗಳ ಒಕ್ಕೂಟ ಜೂನ್ 27ರಂದು ಬೆಂಗಳೂರು ಚಲೋ ಹಮ್ಮಿಕೊಂಡಿದೆ ಅಂತಾ ದಲಿತ ಪರ ಸಂಘಟನೆಯ ಮುಖಂಡ ಬಸವರಾಜ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹೋರಾಟದ ಮೂಲಕ ಗೋನಾಳು ಗಲಾಟೆ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು. ಘಟನೆ ವೇಳೆ ದಲಿತ ಸಮುದಾಯದ ದ್ಯಾವಣ್ಣ ಎಂಬಾತ ತನ್ನ ಎರಡೂ ಮುಂಗೈಗಳನ್ನು ಕಳೆದುಕೊಂಡಿದ್ದಾನೆ. ಆತನಿಗೆ ಕನಿಷ್ಠ 25 ಲಕ್ಷ ಪರಿಹಾರ ಹಾಗೂ ಸರ್ಕಾರಿ ನೌಕರಿ, ಸರ್ಕಾರಿ ಜಮೀನು ನೀಡಬೇಕು. ಮತ್ತು ಕೈ ಕತ್ತರಿಸಿದ ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಗಲಾಟೆಯಲ್ಲಿ ಯಾವುದೇ ರೀತಿ ಭಾಗಿಯಾಗದ ಎರಡೂ ಸಮುದಾಯಗಳ ಅಮಾಯಕರ ಮೇಲೆ ಸುಳ್ಳು ಕೇಸ್ ಹಾಕಲಾಗಿದೆ. ಈ ಎಲ್ಲ ಪ್ರಕರಣಗಳನ್ನು ವಾಪಸ್ ಪಡೆಯಬೇಕು. ಮತ್ತು ಘಟನೆಯಿಂದ ಭಯಭೀತರಾಗಿ ಊರು ತೊರೆದಿರುವ ರೈತ ಕುಟುಂಬಗಳಿಗೆ ಜಿಲ್ಲಾಡಳಿತ ಧೈರ್ಯ ತುಂಬಿ ಅವರನ್ನು ವಾಪಸ್ ಊರಿಗೆ ಕರೆತರುವ ಕೆಲಸ ಮಾಡಬೇಕು ಅಂತಾ ಒತ್ತಾಯಿಸಿದರು.

ಕಂಪ್ಲಿ ತಾಲೂಕಿನ ಗೋನಾಳು ಗ್ರಾಮದಲ್ಲಿ ದಾರಿ ಬಿಡುವ ವಿಷಯಕ್ಕೆ ಸಂಬಂಧಿಸಿದಂತೆ ಮೇ 27ರಂದು ಎರಡು ಗುಂಪುಗಳ ನಡುವೆ ವಾಗ್ವಾದ, ಕಲ್ಲು ತೂರಾಟ ನಡೆದಿತ್ತು. ಈ ವೇಳೆ ವ್ಯಕ್ತಿಯೊಬ್ಬರ ಎಡಗೈ ಹಾಗೂ ಮುಂಗೈ ತುಂಡಾಗಿತ್ತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv