ಗೋಕರ್ಣ ಶ್ರೀಮಹಾಬಲೇಶ್ವರ ದೇಗುಲ ಸರ್ಕಾರದ ಸುಪರ್ದಿಗೆ ಹಸ್ತಾಂತರ

ಉತ್ತರ ಕನ್ನಡ: ಕುಮಟಾ ತಾಲೂಕಿನ ಪುರಾತನ ದೇವಾಲಯ ಗೋಕರ್ಣ ಶ್ರೀಮಹಾಬಲೇಶ್ವರ ದೇವಸ್ಥಾನ ಪುನಃ ಸರ್ಕಾರಕ್ಕೆ ಹಸ್ತಾಂತರವಾಗಿದೆ. 10 ವರ್ಷಗಳ ಬಳಿಕ ಶ್ರೀ ಮಹಾಬಲೇಶ್ವರ ದೇವಸ್ಥಾನ ಮತ್ತೆ ಸರ್ಕಾರದ ಸುಪರ್ದಿಗೆ ಸೇರಿಕೊಂಡಿದೆ.

ಸರ್ಕಾರ ನೇಮಿಸಿದ ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಎಸ್​.ಎಸ್​​. ನಕುಲ್​​ ಅವರಿಗೆ ರಾಮಚಂದ್ರ ಮಠ ಸರ್ಕಾರದ ಸುಪರ್ದಿಗೆ ನೀಡಲಾಯಿತು. ಇಂದಿನಿಂದ ದೇವಸ್ಥಾನದ ಸಂಪೂರ್ಣ ಮೇಲುಸ್ತುವಾರಿಯನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆ ಸಮಿತಿಗೆ ಕೊಡಲಾಗಿದೆ. 2008 ಸೆಪ್ಟೆಂಬರ್​​ 22ರಂದು ಅಂದಿನ ಬಿಜೆಪಿ ಸರ್ಕಾರ ಧಾರ್ಮಿಕ ದತ್ತಿ ಇಲಾಖೆಯ ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಕೈಬಿಟ್ಟಿತ್ತು. ಬಳಿಕ ಮಠದ ಆಡಳಿತವನ್ನು ರಾಮಚಂದ್ರಾಪುರದ ಮಠಕ್ಕೆ ನೀಡಲಾಗಿತ್ತು. ದೇವಸ್ಥಾನ ಆಡಳಿತ ಹಸ್ತಾಂತರ ಆದೇಶ ಪ್ರಶ್ನಿಸಿ ಬಾಲಚಂದ್ರ ದೀಕ್ಷಿತ್​​ ಸೇರಿದಂತೆ ಇನ್ನಿತರರು ಹೈಕೋರ್ಟ್​​ ಮೊರೆ ಹೋಗಿದ್ದರು. ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್​ನ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹಾಗೂ ಅರವಿಂದ್​​ ಕುಮಾರ್​​ ಅವರಿದ್ದ ವಿಭಾಗೀಯ ಪೀಠವು ದೇವಾಲಯವನ್ನು ಪುನಃ ಸರ್ಕಾರಕ್ಕೆ ಹಸ್ತಾಂತರಿಸುವಂತೆ ಆದೇಶ ನೀಡಿತ್ತು.

ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು ಹೈಕೋರ್ಟ್ ಆದೇಶದಂತೆ ದೇವಾಲಯದ ಆಡಳಿತವನ್ನು ತಮ್ಮ ನೇತೃತ್ವದ ಉಸ್ತುವಾರಿ ಸಮಿತಿ ವಹಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ್, ಕುಮಟಾ ಉಪ ವಿಭಾಗಾಧಿಕಾರಿ ಲಕ್ಷ್ಮೀಪ್ರಿಯ, ಆಡಳಿತಾಧಿಕಾರಿ ಹಾಲಪ್ಪ, ತಹಸೀಲ್ದಾರ್ ಮೇಘರಾಜ್ ಉಪಸ್ಥಿತರಿದ್ದರು.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv