2019ರ ಎಲೆಕ್ಷನ್‌ಗೂ ಮುನ್ನ ಹೂಡಿಕೆಗೆ ವಿದೇಶಿ ಕಂಪನಿಗಳ ಹಿಂದೇಟು..?

ನವದೆಹಲಿ: 2019 ರ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳು ಗೆಲುವಿಗಾಗಿ ಕಸರತ್ತು ನಡೆಸುತ್ತಿವೆ. ಆದ್ರೆ ಮತ್ತೊಂದೆಡೆ ಮುಂದಿನ ಲೋಕಸಭೆ ಚುನಾವಣೆ ವಿಶ್ವ ಮಟ್ಟದಲ್ಲಿ ಪರಿಣಾಮ ಬೀರಲಿದ್ದು, ಜಾಗತಿಕ ಹೂಡಿಕೆದಾರರು ಕಾದು ನೋಡುವ ತಂತ್ರಕ್ಕೆ(ವೇಟ್‌ ಅಂಡ್‌ ವಾಚ್‌)ಕ್ಕೆ ಮುಂದಾಗಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ. ಅಮೆರಿಕಾ ಮೂಲದ ರಿಸ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆ ಕ್ರೊಲ್‌ ಈ ವಿಷಯವನ್ನು ಬಹಿರಂಗ ಪಡಿಸಿದೆ. ಭಾರತ ಆರ್ಥಿಕವಾಗಿ ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶವಾಗಿದ್ದು, ಇಲ್ಲಿ ಕಳೆಪೆ ಆಡಳಿತ, ಪಾರದರ್ಶಕತೆಯ ಕೊರತೆ ಹಾಗೂ ವಂಚನೆಯ ಅಪಾಯ ಸೇರಿದಂತೆ ಹಲವು ಸಮಸ್ಯೆಗಳು ಭಾರತದಲ್ಲಿ ವಿದೇಶಿಗರ ಹೂಡಿಕೆ ಮೇಲೆ ಪರಿಣಾಮ ಬೀರಲಿದೆ ಅಂತ ಕ್ರೊಲ್‌ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ತರುಣ್‌ ಬಾಟಿಯಾ ತಿಳಿಸಿದ್ದಾರೆ. ಭಾರತದಲ್ಲಿ ಕೇವಲ ಸತ್ಯಂ ಹಗರಣದ ಕೇಸ್‌ ಒಂದೇ ಇತ್ತು. ಆದ್ರೆ ಇಂತಹ ಅನೇಕ ಪ್ರಕರಣಗಳು ನಡೆಯುತ್ತಿವೆ ಅಂತ ಹೇಳಿದ್ದಾರೆ. ಅಲ್ಲದೇ ಜಾಗತಿಕ ಮಟ್ಟದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತಗೊಂಡಿದೆ. ಇದರಿಂದಾಗಿ ಜಾಗತಿಕ ಹೂಡಿಕೆದಾರರು ವೇಟ್ ಅಂಡ್ ವಾಚ್ ವಿಧಾನವನ್ನ ಅಳವಡಿಸಿಕೊಳ್ಳುತ್ತಿದ್ದಾರೆ. 12 ರಿಂದ 18 ತಿಂಗಳ ಹಿಂದೆ ಇಂತಹ ಅಭಿಪ್ರಾಯ ಇರಲಿಲ್ಲ ಎಂದು ಬಾಟಿಯಾ ಹೇಳಿದ್ದಾರೆ. 2014ರಲ್ಲಿ ಸ್ಥಿರವಾದ ಸರ್ಕಾರ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದಲ್ಲಿ ವಿದೇಶಿ ಉದ್ಯಮಿಗಳು ಹೂಡಿಕೆ ಮಾಡಿದ್ದರು. ಆದ್ರೆ ಇದೀಗ ಅಂತಹ ಪರಿಸ್ಥಿತಿ ಇಲ್ಲ ಅನ್ನೋದು ಕ್ರೊಲ್‌ ಸಂಸ್ಥೆಯ ಅಭಿಪ್ರಾಯವಾಗಿದೆ.