ಗ್ಯಾಂಗ್​ ರೇಪ್​ ಸಂತ್ರಸ್ತೆಗೆ ₹50 ಲಕ್ಷ ಪರಿಹಾರ ನೀಡುವಂತೆ ಗುಜರಾತ್​​ ಸರ್ಕಾರಕ್ಕೆ ‘ಸುಪ್ರೀಂ’ ಆದೇಶ

ನವದೆಹಲಿ: 2002ರ ಗುಜರಾತ್​ ಗಲಭೆ ಬಳಿಕ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ​ ಸಂತ್ರಸ್ತೆ ಬಿಲ್ಕಿಸ್​ ಬಾನೋಗೆ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಗುಜರಾತ್​ ಸರ್ಕಾರಕ್ಕೆ ಇಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಎರಡು ವಾರಗಳ ಒಳಗಾಗಿ ₹50 ಲಕ್ಷ ಪರಿಹಾರ ನೀಡಬೇಕು. ಜೊತೆಗೆ ಬಿಲ್ಕಿಸ್​ ಬಾನೊಗೆ ಸರ್ಕಾರಿ ಉದ್ಯೋಗ ನೀಡಬೇಕು ಹಾಗೂ ನಿಯಮಕ್ಕನುಗುಣವಾಗಿ ಆಶ್ರಯ ಒದಗಿಸಬೇಕು ಎಂದು ಕೋರ್ಟ್​​ ಸೂಚನೆ ನೀಡಿದೆ. ಈ ಹಿಂದೆ ಗುಜರಾತ್​ ಸರ್ಕಾರ 5 ಲಕ್ಷ ರೂಪಾಯಿ ಪರಿಹಾರ ನೀಡಲು ಮುಂದಾದಾಗ ಬಿಲ್ಕಿಸ್​ ಅದನ್ನು ನಿರಾಕರಿಸಿದ್ದರು.

ಏನಿದು ಪ್ರಕರಣ?
ಗೋಧ್ರಾ ಗಲಭೆಯ ನಂತರ 2002ರ ಮಾರ್ಚ್​​ 3ರಂದು ಅಹಮದಾಬಾದ್ ಬಳಿಯ ರಾಂಧಿಕ್​​ಪುರ್​ ಗ್ರಾಮದಲ್ಲಿರೋ ಬಿಲ್ಕಿಸ್​ ಬಾನೋ ಮನೆ ಮೇಲೆ ಜನರ ಗುಂಪು ದಾಳಿ ನಡೆಸಿತ್ತು. ಬಿಲ್ಕಿಸ್​ ಕುಟುಂಬದ 7 ಜನರನ್ನು ಅಂದು ಕೊಲೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ 5 ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್​​ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಬಿಲ್ಕಿಸ್​ ಕುಟುಂಬದ ಉಳಿದ 6 ಜನರು ಕಿಡಿಗೇಡಿಗಳಿಂದ ಹೇಗೋ ತಪ್ಪಿಸಿಕೊಂಡಿದ್ದರು.

2008ರ ಜನವರಿ 21ರಂದು ವಿಶೇಷ ಕೋರ್ಟ್​, ಬಿಲ್ಕಿಸ್​ ಬಾನೋ ಮೇಲೆ ಅತ್ಯಾಚಾರವೆಸಗಿ, ಆಕೆಯ ಕುಟುಂಬದ 7 ಜನರನ್ನ ಕೊಲೆ ಮಾಡಿದ್ದಕ್ಕೆ 11 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಪೊಲೀಸ್​ ಹಾಗೂ ಡಾಕ್ಟರ್​​​ ಸೇರಿದಂತೆ 7 ಜನರನ್ನ ಪ್ರಕರಣದಿಂದ ಖುಲಾಸೆಗೊಳಿಸಿತ್ತು. ನಂತರ 2017ರ ಮೇನಲ್ಲಿ ಹೈಕೋರ್ಟ್​​ನಲ್ಲಿ ಈ 7 ಜನರ ಮೇಲಿನ ಆರೋಪ ಕೂಡ ಸಾಬೀತಾಗಿತ್ತು. ಆರೋಪ ಸಾಬೀತಾಗಿರೋ ಪೊಲೀಸ್​ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಪೂರೈಸುವಂತೆ ಕಳೆದ ತಿಂಗಳು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ​


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv