ಅಪ್ರಾಪ್ತ ಬಾಲಕನ ಟಾರ್ಚರ್​ಗೆ ಪ್ರಾಣಬಿಟ್ಟಳು ಬಾಲಕಿ !

ಚಿಕ್ಕಬಳ್ಳಾಪುರ: ಪ್ರೀತಿಸುವಂತೆ ಪೀಡಿಸುತ್ತಿದ್ದ ಬಾಲಕನ ಟಾರ್ಚರ್​ಗೆ ಬೇಸತ್ತು ಶಾಲಾ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾದ ಘಟನೆ ಬಾಗೇಪಲ್ಲಿ ತಾಲ್ಲೂಕಿನ ಮುಲ್ಲಂಗಿ ಚಟ್ಲಪಲ್ಲಿ ಗ್ರಾಮದಲ್ಲಿ ನಡೆದಿದೆ.
ಅದೇ ಗ್ರಾಮದ 17 ವರ್ಷದ ಅಪ್ರಾಪ್ತ ಬಾಲಕ, 14 ವರ್ಷದ ಬಾಲಕಿಯನ್ನು ಪ್ರೀತಿಸುವಂತೆ ಕಳೆದ 15 ದಿನಗಳಿಂದ ಪೀಡಿಸುತ್ತಿದ್ದ. ಬಾಲಕಿಯ ಮನೆ ಬಳಿ ಬಂದು ಸುತ್ತಾಡಿ, ಕಾಡಿಸುತ್ತಿದ್ದ. ಬಾಲಕನ ಕಿರುಕುಳದಿಂದ ನೊಂದ ಬಾಲಕಿ, ಭಾನುವಾರ ಮಧ್ಯರಾತ್ರಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ. ಘಟನೆ ಬಳಿಕ ಸಿಟ್ಟಿಗೆದ್ದ ಗ್ರಾಮಸ್ಥರು, ಬಾಲಕನನ್ನು ಹಿಡಿದು ಕಟ್ಟಿಹಾಕಿ ಥಳಿಸಿದ್ದಾರೆ. ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕಿಯ ತಂದೆ ಬಾಗೇಪಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿ ಬಾಲಕನ ಚಲನವಲನದ ಬಗ್ಗೆ ಅನುಮಾನ ಬಂದಿದ್ದಾಗಿ ತಿಳಿಸಿದ್ದಾರೆ. ತಮ್ಮ ಪುತ್ರಿಗೆ ಪ್ರೀತಿಸುವಂತೆ ಒತ್ತಾಯಿಸುತ್ತ, ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ. ಭಾನುವಾರ ನಾನು ಕೆಲಸದ ನಿಮಿತ್ತ ಬಾಗೇಪಲ್ಲಿಗೆ ಹೋಗಿದ್ದೆ. ಮಧ್ಯಾಹ್ನ 1 ಗಂಟೆಗೆ ಮನೆಗೆ ವಾಪಸ್ ಹೋದಾಗ ಮಗಳು ಊಟ ಮಾಡದೆ ಬೇಸರದಲ್ಲೇ ಮಲಗಿಕೊಂಡಿದ್ದಳು. ಆರೋಪಿ ಈ ವೇಳೆ ಮನೆಯ ಬಳಿಯೇ ಸುಳಿದಾಡುತ್ತಿದ್ದ. ಅವನು ಕೊಟ್ಟ ಕಿರುಕುಳದಿಂದಲೇ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *