ಈಜುವಾಗ ಸಿಕ್ಕ 1,500 ವರ್ಷದ ಖಡ್ಗದಿಂದ ರಾಣಿ ಎನಿಸಿಕೊಂಡಳು..!

8 ವರ್ಷದ ಬಾಲಕಿಯೊಬ್ಬಳು ಸ್ವಿಮ್ಮಿಂಗ್​​​ಗೆ​ ಹೋದಾಗ 1,500 ವರ್ಷಗಳಷ್ಟು ಹಳೆಯದಾದ ಖಡ್ಗವೊಂದು ಪತ್ತೆಯಾಗಿದೆ. ಇದರಿಂದ ಈಗ ಆಕೆಯನ್ನು ಇಲ್ಲಿನ ಜನ ಸ್ವೀಡನ್​​ನ ರಾಣಿ ಎಂದೇ ಕರೆಯುತ್ತಿದ್ದಾರೆ. ಬಾಲಕಿ ಸಾಗಾ ವೆನೆಸೆಕ್​​​​, ಸ್ವೀಡನ್​​ನ ವಿಡೋಸ್ಟರ್ನ್​​​ ಲೇಕ್​​ನಲ್ಲಿ ಈಜುವಾಗ ಖಡ್ಗ ಪತ್ತೆಯಾಗಿದೆ. ಸದ್ಯ ಈ ಖಡ್ಗವನ್ನು ಸ್ಥಳೀಯ ಮ್ಯೂಸಿಯಂನಲ್ಲಿ ಇಡಲಾಗಿದ್ದು, ಇದು 1,500 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ.

ಬಾಲಕಿ ಸ್ವಿಮ್ಮಿಂಗ್​ ಮಾಡುತ್ತಾ, ಕೆರೆಯ ಬಳಿ ಕಲ್ಲು ಹಾಗೂ ಕಡ್ಡಿಗಳನ್ನ ಎಸೆಯುತ್ತಾ ಆಟವಾಡುತ್ತಿದ್ದಳು. ಈ ವೇಳೆ ಆಕೆ ಉದ್ದದ ಖಡ್ಗವನ್ನು ಎತ್ತಿಕೊಂಡಿದ್ದಾಳೆ. ಅದನ್ನು ಕಡ್ಡಿ ಎಂದುಕೊಂಡು ಇನ್ನೇನು ಕೆರೆಗೆ ಎಸೆಯಬೇಕು ಎನ್ನುವಷ್ಟರಲ್ಲಿ ಖಡ್ಗದ ಹಿಡಿಯನ್ನ ನೋಡಿದ್ದಾಳೆ. ಅಲ್ಲದೆ, ಒಂದು ತುದಿಯಲ್ಲಿ ಚೂಪಾಗಿದ್ದುದು ಕಂಡಿದ್ದಾಳೆ. ಕೂಡಲೇ, ನನಗೆ ಖಡ್ಗ ಸಿಕ್ಕಿದೆ ಎಂದು ಪೋಷಕರ ಬಳಿ ಓಡಿದ್ದಾಳೆ. ತುಂಬಾ ಹಳೆಯದಾದ ಈ ಖಡ್ಗ ರಸ್ಟ್​ ಹಿಡಿದಿತ್ತು. ಇದು ತುಂಬಾ ಹಳೆಯದಾದ, ಅಮೂಲ್ಯವಾದ ಖಡ್ಗವಿರಬಹುದು ಎಂದುಕೊಂಡು ಬಾಲಕಿಯ ಪೋಷಕರು ಪುರಾತತ್ವ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಸದ್ಯ ಇದನ್ನು ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಈ ಖಡ್ಗ 85 ಸೆ.ಮೀ ಉದ್ದವಿದ್ದು, ಲೋಹ ಹಾಗೂ ಮರದಿಂದ ತಯಾರಿಸಲಾಗಿದೆ. ಇದು ಪತ್ತೆಯಾಗಿರುವುದು ನಿಜಕ್ಕೂ ಅದ್ಭುತ. ಈ ಖಡ್ಗದ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ಮ್ಯೂಸಿಯಂನ ತಜ್ಞರೊಬ್ಬರು ಹೇಳಿದ್ದಾರೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv