ರಾಮನಗರದಲ್ಲಿ ಬಿಜೆಪಿಗೆ ಮತ್ತೊಂದು ಶಾಕ್‌!

ಬೆಂಗಳೂರು: ಕಳೆದ 2 ದಿನಗಳ ಹಿಂದೆ ರಾಮನಗರದ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್​. ಚಂದ್ರಶೇಖರ್​ ಚುನಾವಣಾ ಕಣದಿಂದ ಹಿಂದೆ ಸರಿದು, ಕಾಂಗ್ರೆಸ್​ ಸೇರಿದ್ರು. ಇದರ ಬೆನ್ನಲ್ಲೇ ರಾಮನಗರ ಬಿಜೆಪಿಗೆ ಮತ್ತೊಂದು ಶಾಕ್​ ಕಾದಿದೆ. ಎಲ್. ಚಂದ್ರಶೇಖರ್ ಕಣದಿಂದ ಹಿಂದೆ ಸರಿದ ಬೆನ್ನಲ್ಲೇ ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ಜಿಲ್ಲಾಧ್ಯಕ್ಷ ಹಾಗೂ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ನಾಳೆ ಸುದ್ದಿಗೋಷ್ಠಿ ಕರೆಯಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರುದ್ರೇಶ್​ ನಡೆಗೆ ಕಾರಣಗಳೇನು?
ಆಪ್ತರ ಬಳಿ ಪಕ್ಷದ ನಾಯಕರ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಎಂ.ರುದ್ರೇಶ್, ಎಲ್.ಚಂದ್ರಶೇಖರ್ ಕಣದಿಂದ ನಿವೃತ್ತಿ ಪಡೆದಾಗ ಪಕ್ಷದ ಪ್ರಮುಖರು ಏನು ಚರ್ಚೆ ಮಾಡಿಲ್ಲ. ಸಂತೋಷ್, ಅರುಣ್ ಕುಮಾರ್ ಸೇರಿದಂತೆ ಯಾರು ಪಕ್ಷದ ಸಂಘಟನೆ ಬಗ್ಗೆ ಸಲಹೆ ನೀಡಿಲ್ಲ. ಕಾರ್ಯಕರ್ತರನ್ನು ಸಮಾಧಾನ ಮಾಡಲು ಮುಂದಾಗಿಲ್ಲ. ಒಬ್ಬಂಟಿಯಾಗಿ ನಾನೇನು ಮಾಡಲಿ? ಎಂದು ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು, ರಾಮನಗರದ ಬಗ್ಗೆ ಬಿಜೆಪಿ ಪ್ರಮುಖರು ಯಾರು ತಲೆ ಕೆಡಿಸಿಕೊಂಡಿಲ್ಲ. ಇದರಿಂದ ಬೇಸರಗೊಂಡು ಜಿಲ್ಲಾಧ್ಯಕ್ಷ ಸ್ಥಾನ ಮತ್ತು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv