ಜಿ.ಡಿ. ಅಗರ್​ವಾಲ್​ ಸಾವು, ಮೋದಿ ಟ್ವೀಟ್​, ರಮ್ಯಾ ಟಾಂಗ್​..!

ಉತ್ತರಾಖಂಡ: ‘ಗಂಗಾ ನದಿ ಉಳಿಸಿ’ ಹೋರಾಟಗಾರ ಜಿ.ಡಿ. ಅಗರ​ವಾಲ್‌ (87) ಇಂದು ನಿಧನರಾಗಿದ್ದಾರೆ. ಗಂಗಾ ನದಿಯ ಉಳಿವಿಗಾಗಿ ಜೂನ್ 22ರಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಅಗರ​ವಾಲ್​ ಇಂದು ಹೃಷಿಕೇಶದ ಏಮ್ಸ್ ಆಸ್ಪತ್ರೆಯನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರ ಸತ್ಯಾಗ್ರಹ ಇಂದಿಗೆ 111 ದಿನಕ್ಕೆ ಕಾಲಿಟ್ಟಿತ್ತು. ಮೂಲತಃ, ಸ್ವಾಮಿ ಜ್ಞಾನ್​ ಸ್ವರೂಪ್​ ಸಾನಂದ ಹೆಸರಿನ ಅಗರವಾಲ್​ ಅವರು ಕಾನ್ಪುರ ಐಐಟಿಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದರು.

ಜಿ.ಡಿ. ಅಗರ​ವಾಲ್​ ಅವರ ಸಾವಿಗೆ ಸಂತಾಪ ಸೂಚಿಸಿ, ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ‘ಜಿಡಿ ಅಗರ್ವಾಲ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಕಲಿಕೆ, ಶಿಕ್ಷಣ, ಪರಿಸರದ ಉಳಿವಿನ ಬಗ್ಗೆ ಅವರಿಗಿದ್ದ ಕಾಳಜಿ, ವಿಶೇಷವಾಗಿ ಗಂಗಾ ಶುದ್ಧೀಕರಣ ಕುರಿತಾದ ಅವರ ನಡೆ ಯಾವಾಗಲೂ ನೆನಪಿನಲ್ಲಿಡಬೇಕಾಗುತ್ತದೆ. ಅವರ ಆತ್ಮಕ್ಕೆ ನನ್ನ ಸಾಂತ್ವನ’ ಅಂತಾ ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಪ್ರಧಾನಿ ಮೋದಿ ಟ್ವೀಟ್​ಗೆ ತಕ್ಷಣ ಪ್ರತಿಕ್ರಿಯೆ ನೀಡಿರುವ ರಮ್ಯಾ @​ ದಿವ್ಯ ಸ್ಪಂದನ ‘ಈಗ ಟ್ವೀಟ್​ ಮಾಡಿ ಏನು ಪ್ರಯೋಜನ? ಅವರು ಬದುಕಿದ್ದಾಗ ನೀವು ಸ್ಪಂದಿಸಿರಲಿಲ್ಲ’ ಎಂದು ಮೋದಿಗೆ ಟಾಂಗ್​ ಕೊಟ್ಟಿದ್ದಾರೆ.