ಕಬ್ಬನ್​ ಪಾರ್ಕ್​ನಲ್ಲಿ ‘ಪ್ರೀತಿ’ಯಿಂದ ಉಚಿತ ಯೋಗ ಪಾಠ..!

ಬೆಂಗಳೂರು: ಖಾಯಿಲೆ ಯಾವುದೇ ಆದ್ರೂ ಆಸ್ಪತ್ರೆ, ಔಷಧಿಗಳಿಲ್ಲದೆ ವಾಸಿ ಮಾಡಿಕೊಳ್ಳಲು, ದೀರ್ಘಕಾಲದ ಅನಾರೋಗ್ಯ ಸುಧಾರಿಸಿಕೊಳ್ಳಲು ಹಾಗೂ ಉಸಿರಾಟದ ತೊಂದರೆಯಿಂದ ಮುಕ್ತಿ ಪಡೆಯಲು ಸುಲಭ ಉಪಾಯ ಅಂದ್ರೆ ಯೋಗಾ.. ಪ್ರಾಚೀನಕಾಲದಲ್ಲಿ ದೀರ್ಘವಾಗಿ ಆರೋಗ್ಯದಿಂದಿರಲು ಕಂಡುಕೊಂಡ ದೈಹಿಕ ಮತ್ತು ಮಾನಸಿಕ ವ್ಯಾಯಾಮವೇ ಯೋಗ. ಪ್ರತಿನಿತ್ಯ ಯೋಗ ಮಾಡುವುದರಿಂದ ಶಾರೀರಿಕ ಸಮತೋಲನ ಹೊಂದಬಹುದು ಹಾಗೂ ದೈನಂದಿನ ಕೆಲಸ ಹಾಗೂ ಇತರೆ ಚಟುವಟಿಕೆಗಳಲ್ಲಿ ಹೆಚ್ಚು ಉಲ್ಲಾಸದಿಂದ ಕಾರ್ಯನಿರ್ವಹಿಸಬಹುದು.

29 ವರ್ಷದ ಹರಿಯಾಣ ಮೂಲದ ಪ್ರೀತಿ, ನಗರದಲ್ಲಿ ವಾಸವಾಗಿದ್ದಾರೆ. ಅವರು 3 ವರ್ಷಗಳಿಂದ ಕಬ್ಬನ್ ಪಾರ್ಕ್​ನಲ್ಲಿ ಯೋಗ ಶಿಕ್ಷಣ ತರಬೇತಿಯನ್ನ ಉಚಿತವಾಗಿ ನೀಡುತ್ತಾ ಬಂದಿದ್ದಾರೆ. ಉಸಿರಾಟದ ತೊಂದರೆ, ಬಿಪಿ, ಡಯಾಬಿಟಿಸ್​, ಅಸ್ತಮಾ ಹಾಗೂ ಕ್ಯಾನ್ಸರ್ ಮತ್ತು ಇತರೆ ವಯೋ ಸಹಜ ಖಾಯಿಲೆಗಳಿಂದ ಬಳತ್ತಿರುವವರಿಗೆ ಉಚಿತವಾಗಿ ಪ್ರತಿ ದಿನ ಮುಂಜಾನೆ ಯೋಗ ಅಭ್ಯಾಸ ಹೇಳಿ ಕೊಡ್ತಾರೆ. ಮಾನಸಿಕ ಖಿನ್ನತೆಗೆ ಒಳಗಾದವರು ಸೇರಿದಂತೆ ಸಾಕಷ್ಟು ಜನ ಇಲ್ಲಿ ಬಂದು ಯೋಗ ಕಲಿತು ಎಲ್ಲರಂತೆ ಖುಷಿಯಿಂದಿರಲು ಸಾಧ್ಯವಾಗಿದೆ. ಪ್ರತಿ ದಿನ ಮುಂಜಾನೆ 5.30ಕ್ಕೆ ಶುರುವಾಗುವ ಯೋಗ 7.30ರ ವರೆಗೆ ನಡೆಯುತ್ತೆ. ಮಕ್ಕಳಿಂದ ವೃದ್ಧರವರೆಗೆ ಯಾವುದೇ ವಯಸ್ಸು ಲಿಂಗ ಭೇದವಿಲ್ಲದೆ ಎಲ್ಲರಿಗೂ ಸಕಾರಾತ್ಮಕ ಚಿಂತನೆಗಳ ಬಗ್ಗೆ, ಮಿತ ಆಹಾರ ಸೇವನೆ ಹಾಗೂ ಜೀವನ ಶೈಲಿಯ ಬಗ್ಗೆ ತಿಳಿಸಿ ಕೊಡುವುದರ ಜೊತೆಗೆ ಪ್ರಾಣಾಯಾಮ ಮತ್ತು ವಿವಿಧ ಆಸನಗಳ ಬಗ್ಗೆ ಕೂಡ ಇಲ್ಲಿ ಹೇಳಿ ಕೊಡ್ತಾರೆ. ಸದ್ಯ ನೂರಾರು ಜನರು ಬಂದು ಯೋಗ ಕಲಿಯುತ್ತಿದ್ದಾರೆ.