ಕಾಮಾಕ್ಷಿ ಪಾಳ್ಯ ಪೋಲೀಸ್​​ ಭರ್ಜರಿ ಕಾರ್ಯಾಚರಣೆ ನಾಲ್ವರು ಬೈಕ್​ ಕಳ್ಳರ ಬಂಧನ

ಬೆಂಗಳೂರು: ಅಂತೂ ಇಂತೂ ಪೊಲೀಸರು ಎಚ್ಚತ್ತಂತೆ ಕಾಣುತ್ತಿದ್ದು, ಮತ್ತೆ ನಾಲ್ವರು ಬೈಕ್​ ಕಳ್ಳರನ್ನು ಬಂಧಿಸಿದ್ದಾರೆ. ಮನೆ ಮುಂದೆ ನಿಲ್ಲಿಸುತ್ತಿದ್ದ ಬೆಲೆ ಬಾಳುವ ಬೈಕ್​ಗಳನ್ನೇ ಕದಿಯುತ್ತಿದ್ದ ನಾಲ್ವರು ಖದೀಮರನ್ನು ಕಾಮಾಕ್ಷಿ ಪಾಳ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಯೋಗೇಶ್​​, ನವೀನ್, ಕಣ್ಣನ್ ಹಾಗೂ ಶಿವರಾಜ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ 3.5 ಲಕ್ಷ ರೂಪಾಯಿ ಮೌಲ್ಯದ 10 ಬೈಕ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಹಿಂದೆ ಕೂಡ ಇವರು, ಇದೇ ರೀತಿಯ ಆರೋಪದ ಮೇಲೆ ಜೈಲು ಸೇರಿದ್ದರು. ಬಳಿಕ ಹೊರಬಂದು ತಮ್ಮ ಚಾಳಿಯನ್ನು ಮುಂದುವರೆಸಿದ್ದರು ಎನ್ನಲಾಗಿದೆ. ಈ ಸಂಬಂಧ ಕಾಮಾಕ್ಷಿ ಪಾಳ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಮೊನ್ನೆ ತಾನೆ ವೈಟ್​ಫೀಲ್ಡ್​ ಪೊಲೀಸರು ನಾಲ್ವರು ಖದೀಮರನ್ನು ಬಂಧಿಸಿ ಅವರಿಂದ  10 ರಾಯಲ್ ಎನ್​​ಫೀಲ್ಡ್, ಕೆಟಿಎಂ ಡ್ಯೂಕ್‌ ಬೈಕ್, 2 ಬಜಾಜ್ ಪಲ್ಸರ್, ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್, 1 ಹೋಂಡಾ ಡಿಯೋ ಸೇರಿದಂತೆ ಒಟ್ಟು 30 ಲಕ್ಷ ಬೆಲೆ ಬಾಳುವ 16 ಅತ್ಯಾಧುನಿಕ, ನವೀನ ಮಾದರಿಯ, ಅಧಿಕ ಬೆಲೆ ಬಾಳುವ ವಾಹನಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv