ನಾನು ಮಠವಿಲ್ಲದ ಸ್ವಾಮಿ ಇದ್ದಂಗೆ: ಸಿಎಂ ಇಬ್ರಾಹಿಂ

ಬಾಗಲಕೋಟೆ: ಇಬ್ರಾಹಿಂ ಓರ್ವ ತಲೆಹಿಡುಕ ಎಂಬ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಕೇಂದ್ರ ಮಾಜಿ ಸಚಿವ ಸಿಎಂ ಇಬ್ರಾಹಿಂ ತಿರುಗೇಟು ನೀಡಿದ್ದಾರೆ. ನಗರದಲ್ಲಿ ನಡೆದ ಅಲ್ಪಸಂಖ್ಯಾತರ ಸಭೆಯಲ್ಲಿ ಭಾಗಿಯಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಭಾಷೆ, ಸಂಸ್ಕೃತಿ ಈ ಹೇಳಿಕೆಯಿಂದ ಗೊತ್ತಾಗುತ್ತೆ. ನಾವು ಪಾದ ಹಿಡಿಯುವವರು, ತಲೆ ಹಿಡಿಯುವವರಲ್ಲ. ಜನತೆಯ ಪಾದವೇ ನಮಗೆ ಶ್ರೀರಕ್ಷೆ. ಆದರಿಂದ ಅವರು ಹತಾಶರಾಗಿದ್ದಾರೆ. ಈಶ್ವರಪ್ಪ ನನಗೆ ಸ್ನೇಹಿತರೂ ಹೌದು. ಚುನಾವಣೆ ಮುಗಿತನಕ ಇಂತಹ ಹೇಳಿಕೆಗಳು ನಡೆಯುತ್ತವೆ. ಚುನಾವಣೆ ಮುಗಿದ ಮೇಲೆ ಮತ್ತದೆ ಹಳೆ ವಿಶ್ವಾಸ, ಸ್ನೇಹ ಹಾಗೆ ಉಳಿಯುತ್ತೆ. ನಾನು ಮಠವಿಲ್ಲದಿರುವ ಸ್ವಾಮಿ ಇದ್ದಂಗೆ, ಅದನ್ನ ಜನಾನೆ ನೋಡುತ್ತಾರೆ. ಸೂಫಿ ಸಂತರ ಜೊತೆ ಬೆಳೆದವನು ನಾನು. ನಾನು ಸಿದ್ಧಾಂತ, ತತ್ವಗಳನ್ನು ಕಠಿಣವಾಗಿ ವಿಮರ್ಶೆ ಮಾಡುತ್ತೇನೆ. ಆದ್ರೆ, ಶಬ್ದ ಮತ್ತು ಭಾಷೆಯನ್ನು ಮನಸ್ಸು ಮತ್ತು ತಲೆಲಿ ಇಟ್ಕೊಂಡು ಮಾತನಾಡುತ್ತೇನೆ. ಯಾಕೆಂದರೆ ಜೀವನವೇ ಸ್ವಲ್ಪ ದಿನದ್ದು. ಇರುವಷ್ಟು ದಿನ ಎಲ್ಲರ ಜೊತೆ ಸಂತೋಷವಾಗಿ ಇರಬೇಕು. ದೇಶದ, ಜನತೆ ವಿಚಾರ ಬಂದಾಗ, ಅಷ್ಟೇ ಕಠೋರವಾಗಿ, ಶಕ್ತವಾಗಿ ಹೇಳುವಂತದ್ದು ನನ್ನ ಪಾರಂಪರಿಕವಾಗಿ ಮತ್ತು ನನ್ನ ಜೀವದಲ್ಲಿ ಬಂದಿದೆ. ಇವತ್ತು ಈಶ್ವರಪ್ಪ ಒಳ್ಳೆಯ ಶಬ್ದಗಳನ್ನ ಬಳಸುವಂತಾಗಲಿ. ಈಶ್ವರಪ್ಪನವರು ಒಂದು, ಮೂರು ತಿಂಗಳು ಮಠದಲ್ಲಿ ಕಾಲ ಕಳಿಯೋದು ಉತ್ತಮ ಅನ್ನೋದು ನನ್ನ ಸಲಹೆ ಎಂದು ಇಬ್ರಾಹಿಂ ಈಶ್ವರಪ್ಪ ಹೇಳಿಕೆಗೆ ಟಾಂಗ್ ನೀಡಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv