ಲಿಂಗಾಯತರು-ವೀರಶೈವ ಸ್ವಾಮಿಗಳು ನಮ್ಮ ಬೆಂಬಲಕ್ಕೆ ಇದ್ದಾರೆ: ಹೊರಟ್ಟಿ‌

ಹುಬ್ಬಳ್ಳಿ: ವಿನಯ ಕುಲಕರ್ಣಿ ಅವರನ್ನ ಧಾರವಾಡ ಲೋಕಸಭಾ ಅಭ್ಯರ್ಥಿ ಅಂತಾ ಘೋಷಿಸಲಾಗಿದೆ‌. ಪ್ರಾಮಾಣಿಕವಾಗಿ ವಿನಯ ಕುಲಕರ್ಣಿ ಅವರನ್ನ ಬೆಂಬಲಿಸುತ್ತೇವೆ. ಜೆಡಿಎಸ್ ಅಭ್ಯರ್ಥಿ ಅಂದುಕೊಂಡೇ ಬೆಂಬಲ ನೀಡುತ್ತೇವೆ. ವಿನಯ ಗೆಲ್ಲುತ್ತಾರೆ ಅನ್ನೊ ಭಾವನೆ ಇದೆ ಎಂದು ಜೆಡಿಎಸ್ ಮಾಜಿ ಸಚಿವ ಬಸವರಾಜ ಹೊರಟ್ಟಿ‌ ಹೇಳಿದ್ದಾರೆ.

ಮೈತ್ರಿ ಪಕ್ಷದ ಧಾರವಾಡ ನಾಯಕರು ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಜಂಟಿ ಸುದ್ದಿಗೋಷ್ಠಿ ಆಯೋಜನೆ ಮಾಡಿದ್ದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವರಾಜ ಹೊರಟ್ಟಿ‌, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದೆ. ಅದರಂತೆ ಲೋಕಸಭೆ ಚುನಾವಣೆಗೂ ಮೈತ್ರಿ ಮುಂದುವರೆದಿದೆ. ಕಾಂಗ್ರೆಸ್, ಜೆಡಿಎಸ್ ಎಂಬ ಭೇದ ಮಾಡದೇ ಒಂದೇ ಪಕ್ಷದ ಅಭ್ಯರ್ಥಿ ಅಂದುಕೊಂಡು ಚುನಾವಣೆ ಎದುರಿಸಲಿದ್ದೇವೆ. ಎಲ್ಲೆಡೆ ಕಾಂಗ್ರೆಸ್ ಹಾಗೂ ಜೆಡಿಎಸ್​​ಗೆ ಪೂರಕ ವಾತಾವರಣ ಇದೆ. ಉಭಯ ಪಕ್ಷದ ನಾಯಕರು ಒಂದೇ ವೇದಿಕೆಯ ಮೇಲೆ ಇದ್ದೇವೆ. ಭಿನ್ನಾಭಿಪ್ರಾಯ ಬದಿಗೊತ್ತಿ ಕೆಲಸ ಮಾಡಬೇಕು. ಎರಡೂ ಪಕ್ಷದ ಕಾರ್ಯಕರ್ತರು ಭಿನ್ನಾಭಿಪ್ರಾಯ ಮರೆತು ಕೆಲಸ ಮಾಡಬೇಕು ಎಂದರು.

ಲಿಂಗಾಯತರು ಹಾಗೂ ವೀರಶೈವ ಲಿಂಗಾಯತರು ಕೂಡಿಕೊಂಡು ಚುನಾವಣೆಗೆ ಹೋಗುತ್ತೇವೆ. ಕಳೆದ ಚುನಾವಣೆಯಲ್ಲಿ ಲಿಂಗಾಯತ ಹೋರಾಟವನ್ನು ಕೈ ಬಿಡಲಾಗಿದೆ. ಚುನಾವಣೆ ಸಂದರ್ಭದಲ್ಲಿ ಲಿಂಗಾಯತ ಹೋರಾಟ ವಿಚಾರ ಬರುವುದಿಲ್ಲ. ಎರಡು ಸಮುದಾಯದ ಸ್ವಾಮಿಗಳು ನಮ್ಮ ಬೆಂಬಲಕ್ಕೆ ಇದ್ದಾರೆ. ಎಲ್ಲ ಲಿಂಗಾಯತ ಹಾಗೂ ವೀರಶೈವ ಲಿಂಗಾಯತ ಮುಖಂಡರನ್ನು ಜೊತೆಗೆ ಕರೆದುಕೊಂಡು ಚುನಾವಣೆಗೆ ಹೋಗುತ್ತೇವೆ ಎಂದು ಹೇಳಿದ್ದಾರೆ.

ನಂತರ ಮಾತನಾಡಿದ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ, ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಐವತ್ತು ಸಾವಿರ ಮತಗಳಿಂದ ಪರಾಜಿತಗೊಂಡಿದ್ದೆ. ಅಂದು ನನ್ನ ಆಯ್ಕೆ ತರಾತುರಿಯಲ್ಲಿ ನಡೆದಿದ್ದು ನನ್ನ ಸೋಲಿಗೆ ಕಾರಣವಾಗಿತ್ತು. ಆದರೆ ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ಹಾಗಾಗಿಲ್ಲ. ಯಾವುದೇ ಬಿಕ್ಕಟ್ಟು, ಸಮಯದ ಅಭಾವ ಇಲ್ಲದಿರುವುದು ಹಾಗೂ ಹೊರಟ್ಟಿಯವರಂತ ಘಟಾನುಘಟಿ ನಾಯಕರು ನಮ್ಮ ಜೊತೆಗಿದ್ದಾರೆ. ಈ ಭಾರಿ ಪ್ರಚಂಡ ಬಹುಮತದಲ್ಲಿ ಗೆಲುವು ಸಾಧಿಸುತ್ತೇನೆ. ಈ ಭಾರಿ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿಯವರನ್ನು ಸೋಲಿಸುತ್ತೇವೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಒಗ್ಗಟ್ಟಿನ ಪಾಠವನ್ನು ಜೋಶಿಯವರಿಗೆ ಕಲಿಸುತ್ತೇವೆ ಎಂದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv