ಉಮೇಶ್ ಜಾಧವ್ ಹೆಸರು ಕೇಳಿದ್ರೆ ಖರ್ಗೆಗೆ ನಡುಕ ಶುರು: ಚಿಂಚನಸೂರ

ಯಾದಗಿರಿ: ನಾವು ಈಗ ಅಶ್ವಮೇಧ ಕುದುರೆ ಕಟ್ಟಿ ಹಾಕಿದ್ದೇವೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಅವರು ಮೈತ್ರಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಶ್ವಮೇಧ ಕುದುರೆ ಎಂದು ಹೇಳಿದ್ದಾರೆ.

ಜಿಲ್ಲೆಯ ಗುರುಮಠಕಲ್​​ನ ಚಂಡ್ರಕಿ ಗ್ರಾಮದಲ್ಲಿ  ಮಾತನಾಡಿದ ಬಾಬುರಾವ್ ಚಿಂಚನಸೂರ, ಮಲ್ಲಿಕಾರ್ಜುನ ಖರ್ಗೆ ಅವರನ್ನು 50ವರ್ಷದಿಂದ ಯಾರೂ ಕಟ್ಟಿ ಹಾಕಿಲ್ಲ. ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಾವು ಕಟ್ಟಿ ಹಾಕಿದ್ದೇವೆ. ಕಟ್ಟಿ ಹಾಕುವ ಶಕ್ತಿ ಡಾ. ಉಮೇಶ್ ಜಾಧವ್ ಅವರಿಗೆ ಇದೆ, ಜಾಧವ್ ಅವರ ಹೆಸರು ಕೇಳಿದ್ರೆ ಖರ್ಗೆಗೆ ನಡುಕ ಶುರುವಾಗಿದೆ. ಖರ್ಗೆ ಅವರಿಗೆ ಚಳಿ ಜ್ವರ ಬಂದಿದೆ, ಜಾಧವ್ ಅವರು 1 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ. ನಾನು ಹಾಗೂ ಮಾಲಿಕಯ್ಯ ಗುತ್ತೆದಾರ ಸೋಲಿನ ಪ್ರತಿಫಲ ಜಾಧವ್ ಅವರ ಗೆಲುವಿನಲ್ಲಿ ಕಾಣುತ್ತೇವೆ. ಸಚಿವ ಪಿ.ಟಿ.ಪರಮೇಶ್ವರ ನಾಯಕ ಬಂಜಾರ ಸಮುದಾಯದ ಜನರಿಗೆ ದುಡ್ಡು ಕೊಡಲು ಹೋದಾಗ ಜನ ಆಕ್ರೋಶಗೊಂಡು ಹಲ್ಲೆ ನಡೆಸಿದ್ದಾರೆ. ಗುರುಮಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಅವರ ಮೇಲೆ ಖರ್ಗೆ ಅವರು ಸಾಕಷ್ಟು ಕೇಸ್ ಹಾಕಿದ್ದಾರೆ. ನಾಗನಗೌಡ ಕಂದಕೂರ ಅವರಿಗೆ ಕೇಸ್ ಹಾಕಿದ್ದ ನೋವು ಕಾಡುತ್ತಿದೆ. ಬಿಜೆಪಿಗೆ ಬೆಂಬಲಿಸಬೇಕೆಂದು ನಾಗನಗೌಡ ಕಂದಕೂರ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇವೆ. ನಾಗನಗೌಡ ಕಂದಕೂರ ಜೊತೆ ಮಾತನಾಡಿ ಬಿಜೆಪಿ ಬೆಂಬಲಿಸಬೇಕೆಂದು ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಬಾಬುರಾವ್ ಚಿಂಚನಸೂರ, ಈ ವಿಷಯ ನ್ಯಾಯಾಲಯದ ವಿಚಾರಣೆ ಹಂತದಲ್ಲಿದೆ. ಈ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ನನ್ನದು ತೆರೆದ ಇತಿಹಾಸವಿದೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv