ಸಿದ್ದರಾಮಯ್ಯಗೆ ಹುಚ್ಚ ಎನ್ನದೇ ಮತ್ತೇನು ಅನ್ನಬೇಕು? ಈಶ್ವರಪ್ಪ ಪ್ರಶ್ನೆ

ದಾವಣಗೆರೆ: ಪ್ರಕೃತಿ ಚಿಕಿತ್ಸಾಲಯದಲ್ಲಿ ಚುನಾವಣೆಗೆ ನಿಲ್ಲಲ್ಲ ಅಂತಾರೆ. ಅಲ್ಲಿಂದ ಹೊರಬಂದು ಮುಂದಿನ ಸಿಎಂ ನಾನೇ ಅಂತಾರೆ. ಹಾಗಾಗಿ ಸಿದ್ದರಾಮಯ್ಯರನ್ನು ಹುಚ್ಚಾ ಅನ್ಬೇಕಾ ಮತ್ತೇನೆನ್ನಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಡಿಸಿಎಂ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಬಳಿಕ ಕಾಂಗ್ರೆಸ್ ದಿಕ್ಕೆಟ್ಟು ಹೋಗಿದೆ. ಕಾಂಗ್ರೆಸ್​​ ತನ್ನ ನಾಯಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾಗಿದೆ. ಹೀಗಾಗಿ ಸಿದ್ದರಾಮಯ್ಯ ಸಮನ್ವಯ ಸಮಿತಿ ಸ್ಥಾನಕ್ಕೆ ರಾಜೀನಾಮೆ‌ ನೀಡಲಿ. ಶಾಸಕ ಕೊಲೆ ಮಾಡುವ ಮಟ್ಟಿಗೆ ಪರಿಸ್ಥಿತಿ ಬಂದಿದೆ. ಕೊಲೆಗಡುಕರನ್ನ ಅರೆಸ್ಟ್ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಈ ಸರ್ಕಾರ ಪತನವಾಗಲು ಯಾವ ಆಪರೇಶನ್ ಅವಶ್ಯಕತೆಯಿಲ್ಲ. ಸಿದ್ದರಾಮಯ್ಯ, ಖರ್ಗೆ, ಪರಮೇಶ್ವರ್ ಗುಂಪುಗಳು ಬಡಿದುಕೊಂಡು ಸರ್ಕಾರ ಕೆಡುವುತ್ತಾರೆ. ಕಾಂಗ್ರೆಸ್​​ ನಾಯಕರು ಬರೀ ಸುಳ್ಳು ಹೇಳುತ್ತಾ ತಿರುಗುತ್ತಿದ್ದಾರೆ ಎಂದು ಈಶ್ವರಪ್ಪ ಕಿಡಿಕಾರಿದರು.
ಇನ್ನು, ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡುವ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿಯವರ ರಾಜೀನಾಮೆ ಹೇಳಿಕೆ ಬುಟಾಟಿಕೆ. ಕುತ್ತಿಗೆ ಹಿಡಿದು ತಳ್ಳಿದರೂ ಕುಮಾರಸ್ವಾಮಿ ರಾಜೀನಾಮೆ ಕೊಡಲ್ಲ. ನಿಮ್ಮ ಗೊಂದಲದಿಂದ ಸ್ವಾಭಾವಿಕವಾಗಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.