ಚೌಕಿದಾರ್ ಅಂತ ಹೇಳೋರು ರೈತರನ್ನ ಕಾದ್ರಾ? ಯುವಕರನ್ನು ಕಾದ್ರಾ?: ಸಿದ್ದರಾಮಯ್ಯ ಪ್ರಶ್ನೆ

ಮೈಸೂರು: ಲೋಕಪಾಲ್ ಜಾರಿಗೆ ಈಗ ಕಮಿಟಿ‌ ನೇಮಕ ಮಾಡ್ತಾರೆ. ಇದು ಚುನಾವಣೆಯ ಗಿಮಿಕ್ ಅಲ್ವಾ. ಚೌಕಿದಾರ್ ಅಂತ ಹೇಳ್ತಿರಾ ನೀವು ಯಾರನ್ನ ಕಾಯ್ತಿದ್ದೀರಾ..? ರೈತರನ್ನ ಕಾದ್ರಾ? ಯುವಕರನ್ನು ಕಾದ್ರಾ? ಉದ್ಯೋಗ ಕೊಡ್ತಿನಿ ಅಂದ್ರಿ ಕೊಟ್ರಾ? ಎಷ್ಟು ಕೊಟ್ರಿ. ಅದಲ್ಲಾ ಒಂದ್ಕಡೆ ಇರ್ಲಿ ಕಪ್ಪು ಹಣ ತಂದು ಕೊಡ್ತೀನಿ ಅಂತ ಯಾಕೆ ಹೇಳಿದ್ರಿ, ಯಾರು ಕೇಳಿದ್ರು ಹೇಳಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ  ಮಾತನಾಡಿದ ಅವರು, ರಾಮಮಂದಿರ ಕಟ್ತೀವಿ ಅಂತ ಹೇಳ್ತಾರೆ ಇದು ಸಹ ಇವತ್ತಿನ ವಿಚಾರ ಅಲ್ಲ. 6 ವರ್ಷ ವಾಜಪೇಯಿ ಪ್ರಧಾನಿ ಆಗಿದ್ರು ಮೋದಿ ಐದು ವರ್ಷ ಇದ್ರು. 11 ವರ್ಷಗಳಲ್ಲಿ ಯಾಕೆ ರಾಮಮಂದಿರ ಕಟ್ಟಿಲ್ಲ. ಜನರಿಂದ ಹಳ್ಳಿಗಳಿಂದ ಇಟ್ಟಿಗೆ , ಕಬ್ಬಿಣ ಇಸ್ಕೋಂಡ್ ಹೋದ್ರಿ. ಮತ್ತೆ ಈಗ ರಾಮಮಂದಿರ ಕಟ್ತೀವಿ ಅಂದ್ರೆ ಜನ ನಂಬುತ್ತಾರಾ? ಅಮಿತ್ ಶಾ ಹೇಳ್ತಾನೆ ಇದು ಚುನಾವಣೆಗಾಗಿ ಹೇಳಿದ್ವಿ ಅಂತ. ಅಧಿಕಾರದಲ್ಲಿರುವ ರಾಷ್ಟ್ರೀಯ ಪಕ್ಷ ಹೀಗೆ ಸುಳ್ಳು ಭರವಸೆ ಕೊಟ್ರೆ ಜನ ನಂಬ್ತಾರಾ ಎಂದು ಪ್ರಶ್ನಿಸಿದ್ರು. ಬಿಜೆಪಿ ಬಂದ್ಮೇಲೆ ಇಂಧನ ಬೆಲೆ ಜಾಸ್ತಿಯಾಗಿದೆ. ಎಲ್ಲಿದೆ ಅಚ್ಛೇ ದಿನ್? ಇದೆನಾ‌ ಅಚ್ಛೆದಿನ್ ಅಂದ್ರೆ? ಕಚ್ಚಾ ತೈಲ ಅಂತರಾಷ್ಟ್ರೀಯ ಮಟ್ಟದಲ್ಲಿ ಕಡಿಮೆ ಆದ್ರೂ ಗ್ರಾಹಕರಿಗೇಕೆ ಅದು ಸಿಕ್ಕಿಲ್ಲ. ಗ್ಯಾಸ್ ಸಿಲಿಂಡರ್ ಬೆಲೆ ಕಾಂಗ್ರೆಸ್ ಇದ್ದಾಗ ₹360 ಇತ್ತು. ಈಗ ₹880 ಆಗಿದೆ. ನಾನು ಗ್ಯಾಸ್ ಸಿಲಿಂಡರ್ ಯಾವತ್ತೂ ತಗೊಂಡಿಲ್ಲ. ಜನರು ಹೇಳೋದನ್ನ ನಾನು ಹೇಳ್ತಿದ್ದಿನಿ ಎಂದು ಹೇಳಿದ್ರು.

ನಾನು ಐದು ವರ್ಷದಲ್ಲಿ ಏನ್ ಮಾಡಿದ್ದೀನಿ ಅಂತ ಜನರ ಮುಂದೆ ಇಡ್ತೀನಿ. ನರೇಂದ್ರ ಮೋದಿ ಏನ್ ಮಾಡಿದ್ದಾರೆ ಅಂತ ಜನರ ಮುಂದೆ ಇಡ್ತಾರಾ? ಇಡೀ ದೇಶದಲ್ಲಿ ₹54 ಸಾವಿರ ಕೋಟಿ ಎಸ್​​ಸಿಪಿ , ಟಿಎಸ್​ಪಿ ಅನುದಾನ ಖರ್ಚು ಮಾಡಬೇಕು, ಮಾಡಿಲ್ಲ. ಅನ್ನ ಭಾಗ್ಯದಂತ ಯೋಜನೆಗಳನ್ನು ಬಿಜೆಪಿಯವರು ರಾಜ್ಯದಲ್ಲಿ  ತಂದಿದ್ದಾರಾ? ಬಿಜೆಪಿಯವರು ಎಲ್ಲಾದ್ರೂ ರೈತರ ಸಾಲ ಮನ್ನಾ ಮಾಡಿದ್ದಾರಾ? ಇದೇ ಯಡಿಯೂರಪ್ಪ ಸಾಲ ಮನ್ನಾ ಮಾಡೋದಕ್ಕೆ ನಾನು ಹಣ ಪ್ರಿಂಟಿಂಗ್ ಮಷಿನ್ ಇಟ್ಕೊಂಡಿದ್ದಿನಾ ಅಂದ್ರು. ಮತ್ತೆ ಯಡಿಯೂರಪ್ಪ ರೈತರ ಹೋರಾಟಗಾರ ಅಂತ ಹೇಳ್ತಾರೆ ಅಂತ ಕುಟುಕಿದರು.

ನೋಟ್ ಅಮಾನ್ಯೀಕರಣ ಮಾಡಿದಾಗ ಐದು ನೂರು ರೂ., ಸಾವಿರ ರೂ ಹಳೇ ನೋಟ್ ₹46 ಲಕ್ಷ ಕೋಟಿಯಷ್ಟು ಚಾಲ್ತಿಯಲ್ಲಿತ್ತು. ಅದ್ರಲ್ಲಿ ಶೇ. 99 ರಷ್ಟು ನೋಟ್​ಗಳು ಬ್ಯಾಂಕ್​ಗೆ ವಾಪಾಸ್​ ಬಂತು. ಮತ್ತೆ ಕಪ್ಪು ಹಣ ಎಲ್ಲಿದೆ ಆರ್​ಬಿಐ ನವ್ರು ಈವರೆಗೂ ಎಲ್ಲಿಯೂ ಅದನ್ನು ಬಯಲು ಮಾಡಿಲ್ಲ. ನೋಟ್ ಅಮಾನ್ಯೀಕರಣದಿಂದ ಜಿಡಿಪಿ ಶೇ. 2 ರಷ್ಟು ಕಡಿಮೆಯಾಯ್ತು. ನನಗಿರುವ ಮಾಹಿತಿ‌ ಪ್ರಕಾರ ನೋಟ್ ಬಂದ್​ನಿಂದ ಒಂದು‌ ಕೋಟಿ ಎಂಬತ್ತು‌ ಲಕ್ಷ ನಿರುದ್ಯೋಗ ಸೃಷ್ಟಿಯಾಗಿದೆ. ಮೋದಿ ಮನ್ ಕಿ ಬಾತ್​, ಮನ್ ಕಿ ಬಾತ್ ಅಂತಾರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv